ಕಾರ್ಕಳ: ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆಯಲ್ಲಿ ಅಂತರ್ ಕಾಲೇಜು ಕ್ರಿಕೆಟ್ ಟೂರ್ನಮೆಂಟಿನ ಪೂರ್ವಭಾವಿಯಾಗಿ ನಡೆದ ಬ್ಯಾನರ್ ರಿಲೀಸ್ ಕಾರ್ಯಕ್ರಮದಲ್ಲಿ ಖ್ಯಾತ ನಟ, ನಿರ್ದೇಶಕ, ನಾಟಕಕಾರ ಪ್ರಸನ್ನ ಶೆಟ್ಟಿ ಬೈಲೂರು ಬ್ಯಾನರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಅತ್ಯಂತ ಹೆಚ್ಚು ಕ್ರೀಯಾಶೀಲರಾಗಿರುತ್ತಾರೆ. ಅವರ ಪ್ರತಿಭೆಗಳನ್ನು ಅನಾವರಣಗೊಳಿಸಬೇಕಾದರೆ ಸಾಹಿತ್ಯ, ನಾಟಕ, ಸಾಂಸ್ಕೃತಿಕ ಕ್ರೀಡೆಗಳು ಮಹತ್ತರ ಪಾತ್ರವನ್ನು ವಹಿಸುತ್ತದೆ. ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ ಉತ್ತಮ ರೀತಿಯಲ್ಲಿ ನಡೆದು ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಲು ಉಪನ್ಯಾಸಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡ ಉತ್ತಮ ಕೆಲಸವಗಳೇ ಕಾರಣ. ವಿದ್ಯಾರ್ಥಿಗಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಹಾಗೂ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಮಿನುಗುತಾರೆ ಪ್ರಸನ್ನ ಶೆಟ್ಟಿ ಬೈಲೂರು ಇವರು ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಮುಂದಿನ ಕ್ರೀಡಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.

ಪ್ರೌಢಶಾಲಾ ಮುಖ್ಯಶಿಕ್ಷಕಿ ಪಾಟ್ಕರ್ ಕ್ರಿಕೆಟ್ ಟ್ರೋಫಿಗಳನ್ನು ಅನಾವರಣಗೊಳಿಸಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ಅವರ ನಿರಂತರ ಪ್ರೋತ್ಸಾಹ, ದೂರದೃಷ್ಟಿತ್ವ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಪ್ರೇರಕ ಎಂದು ನುಡಿದರು.
ಪ್ರಾಥಮಿಕ ಶಾಲಾ ಮುಖ್ಯಸ್ಥೆ ಲೊಲಿಟಾ ಡಿಸಿಲ್ವ ಕ್ರಿಕೆಟ್ ಜೆರ್ಸಿಯನ್ನು ಅನಾವರಣಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ವ ತಯಾರಿ ಮಾಡಿ ಆಗಿರುವ ಯಶಸ್ಸು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಾದ ಪ್ರಿನ್ ಸ್ಟನ್, ಅಝ್ಮಿಯಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಅಫ್ಸಿಯಾನ್, ಹಿತೇಶ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಕೊನೆಯಲ್ಲಿ ಪ್ರತೀಕ್ಷ್ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು.
ಭಾಗವಹಿಸಿರುವ ಅತಿಥಿಗಳನ್ನು, ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ಅವರು ಅಭಿನಂದಿಸಿದರು.








































