ಉದ್ಯಮಿಗಳಿಂದ ಕೊಲೆ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ಸುರೇಶ್ ಅಮೀನ್ ಪೊಲೀಸ್ ಬಲೆಗೆ

ಬಂಧಿತ ಆರೋಪಿ ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರ

ಉಡುಪಿ: ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡು ಕೊಲೆ ಬೆದರಿಕೆ ಬಡ್ಡಿ, ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿಯ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು ತಾಲೂಕು ಬಡಾ ಎರ್ಮಾಳ್ ನಿವಾಸಿ ಸುರೇಶ್ ಅಮೀನ್ (38 ವರ್ಷ) ಎಂಬಾತನೇ ಬಂಧಿತ ಆರೋಪಿ.

ಭೂಗತ ಪಾತಕಿ ಹೇಮಂತ ಪೂಜಾರಿ ಉಡುಪಿ ಜಿಲ್ಲೆಯ, ಪಡುಬಿದ್ರೆ, ಶಿರ್ವಾ, ಕಾಪು, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ಮಾಡಿಕೊಂಡಿರುವ ಉದ್ದಿಮೆದಾರರನ್ನು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರಿಗೆ ಕರೆ ಮಾಡಿ, ಕೋಟ್ಯಂತರ ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದ. ಹಣ ಕೊಡದೆ ಇದ್ದಲ್ಲಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 5, ಶಿರ್ವ ಠಾಣೆಯಲ್ಲಿ 1, ಕಾಪು ಠಾಣೆಯಲ್ಲಿ 1 ಮತ್ತು ಮಣಿಪಾಲ ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೇಮಂತ್ ಪೂಜಾರಿಗೆ ಉದ್ಯಮಿಗಳ ಮೊಬೈಲ್ ಸಂಖ್ಯೆ ನೀಡಿ ಸಹಾಯ ಮಾಡುತ್ತಿದ್ದ ಸುರೇಶ್ ಅಮೀನ್ ನನ್ನು ಬಂಧಿಸಿದ್ದಾರೆ.

ಆರೋಪಿ ಸುರೇಶ್ ಅಮೀನ್ ಹಾಗೂ ಹೇಮಂತ ಪೂಜಾರಿ ಇವರ ವಿರುದ್ಧ ದಾಖಲಾದ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಉದ್ದಿಮೆದಾರರೊಬ್ಬರು ಹಣ ಕೊಡದೆ, ಪೋನ್ ಕಾಲ್ ರಿಸೀವ್ ಮಾಡದೆ ಇದ್ದುದರಿಂದ ಅವರನ್ನು ಕೊಲೆ ಮಾಡುವ ಬಗ್ಗೆ ಒಳಸಂಚು ರೂಪಿಸಿದ್ದರು ಎಂಬ ಅಂಶವೂ ತಿಳಿದುಬಂದಿದೆ. ಸದ್ರಿ ಕೃತ್ಯಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಹೇಮಂತ ಪೂಜಾರಿ ಸುರೇಶ್ ಅಮೀನ್‌ನಿಗೆ ಕಳುಹಿಸಿಕೊಟ್ಟ ರೂ 5 ಲಕ್ಷ ಹಣದಲ್ಲಿ ಖರ್ಚು ಮಾಡಿ ಉಳಿದ 4,13,000 ರೂ. ಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ವಾಪಾಸು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.















































































error: Content is protected !!
Scroll to Top