ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘವಾದ ಕಲಾಸಂಗಮವು ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟಿ’ಯ ನಾಲ್ಕನೇ ಆವೃತ್ತಿಯನ್ನು ಅಕ್ಟೋಬರ್ 24 ರಂದು ನಿಟ್ಟೆ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದು, ಈ ಸಂಬಂಧ ಪತ್ರಿಕಾಗೋಷ್ಠಿ ನಡೆಯಿತು.
ಕೀರ್ತಿಶೇಷ ಸೂರಿಕುಮೇರು ಶ್ರೀ ಕೆ. ಗೋವಿಂದ ಭಟ್ ಅವರ ಹೆಸರನ್ನು ಈ ಬಾರಿಯ ವೇದಿಕೆಗೆ ಇಡಲಾಗಿದ್ದು, ಪ್ರಸಕ್ತಸಾಲಿನ ಯಕ್ಷಗವಿಷ್ಟಿಯನ್ನು ದಿ| ಶ್ರೀ ಎನ್. ವಿನಯ ಹೆಗ್ಡೆ ಅವರ ಸ್ಮರಣಾರ್ಥ ಸಮರ್ಪಿಸಲಾಗುತ್ತಿದೆ. ಶಿಕ್ಷಣ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಅವರ ಚಿಂತನೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರತಿವರ್ಷದಂತೆ 5 ಆಹ್ವಾನಿತ ತಂಡಗಳ ಮಧ್ಯೆ ಈ ಸ್ಪರ್ಧೆ ನಡೆಯಲಿದ್ದು, ಪ್ರಸ್ತುತ ವರ್ಷ “ಇನವಂಶಚರಿತಾಮೃತ” ಎಂಬ ಶೀರ್ಷಿಕೆಯಡಿ ಸೂರ್ಯವಂಶ ಸಂಜಾತರಾಗಿ ರಾಜ್ಯವನ್ನಾಳಿದ 5 ರಾಜರಾದ ನಿಬಂಧನ, ದಂಡಕ, ದಿಲೀಪ, ಭಗೀರಥ ಹಾಗೂ ದಶರಥರ ಕಥಾನಕವನ್ನು ರಂಗದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕಾರ್ಯಕ್ರಮವನ್ನು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದ ಖ್ಯಾತ ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಅವರು ಉದ್ಘಾಟಿಸಲಿರುವರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ವಹಿಸಲಿರುವರು.
ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯ ಶ್ರೀ ಪ್ರಕಾಶ ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಒಂದು ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಏಕೈಕ ಸಂಸ್ಥೆ ನಿಟ್ಟೆ ಕಾಲೇಜಾಗಿದ್ದು, ಕಾಗದ ರಹಿತ ಮೌಲ್ಯಮಾಪನ, ವೆಬ್ ಸೈಟ್ ನೋಂದಣಿ ವ್ಯವಸ್ಥೆ, 85 ಡೆಸಿಬೆಲ್ ಶಬ್ದ ಮಿತಿ ಮುಂತಾದ ಆಧುನಿಕ ಅಂಶಗಳನ್ನು ಸಾಂಪ್ರದಾಯಿಕ ಕಲೆಯೊಂದಿಗೆ ಸಮ್ಮಿಲಿತಗೊಳಿಸಿ ತಾಂತ್ರಿಕವಾಗಿಯೂ ಬದಲಾವಣೆಯತ್ತ ಹೊಸ ಹೆಜ್ಜೆ ಇಡುವ ಪ್ರಯತ್ನದಲ್ಲೂ ಸೈ ಎನಿಸಿಕೊಂಡಿದೆ.
2023 ರಿಂದ ಮೊದಲ್ಗೊಂಡು ಹಲವಾರು ಯಕ್ಷಗಾನ ಸ್ಪರ್ಧೆಗಳಲ್ಲಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳ ತಂಡ ಜಯಶಾಲಿಯಾಗಿದ್ದು, ಇದೀಗ ಸ್ಪರ್ಧಾ ಸಂಯೋಜನೆಯಲ್ಲಿಯೂ ಇತರರಿಗಿಂತ ಭಿನ್ನವಾಗಿ ಉಳಿದವರಿಗೆ ಮಾದರಿಯಾಗಿ ನಿಂತಿದೆ. ಇಲ್ಲಿ ಪ್ರಮುಖವಾದ ಇನ್ನೊಂದು ಅಂಶವೇನೆಂದರೆ, ಯಕ್ಷಗಾನ ತಂಡದ ಸದಸ್ಯರು ಮಾತ್ರವಲ್ಲದೆ, ವಿವಿಧ ತಾಂತ್ರಿಕ ಅಂಶಗಳಾದ ವೆಬ್ಸೈಟ್ ನೋಂದಣಿ, ಕಾಗದರಹಿತ ಮೌಲ್ಯಮಾಪನ ತಂತ್ರಜ್ಞಾನವನ್ನು ಯಕ್ಷಗಾನದ ಬಗ್ಗೆ ಹೆಚ್ಚು ಅರಿವಿರದ ವಿದ್ಯಾರ್ಥಿಗಳು ಬಹಳ ಆಸ್ಥೆಯಿಂದ ತಯಾರಿಸಿಕೊಟ್ಟಿದ್ದಾರೆ.
ಉಳಿದ ಸ್ಪರ್ಧೆಗಳಂತೆ ಪಾತ್ರಸ್ವರೂಪದ ಆಧಾರದ ಮೇಲೆ ವೈಯಕ್ತಿಕ ಬಹುಮಾನ ವಿಂಗಡಿಸುವ ಬದಲು, ಪಾತ್ರ ಚಿತ್ರಣ ಆಧಾರಿತ ವೈಯಕ್ತಿಕ ಬಹುಮಾನ ನೀಡುವ ಮೂಲಕ ಪ್ರತಿ ವರ್ಷವೂ ಏನಾದರೂ ಒಂದು ಸುಧಾರಣೆಯನ್ನು ಯಕ್ಷಗಾನ ಸ್ಪರ್ಧಾಲೋಕದ ಮುಂದಿಡುತ್ತಿದೆ. ಯಕ್ಷಗಾನ ತಂಡದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಹೊಂದಿದ್ದು, ಔದ್ಯೋಗಿಕವಾಗಿಯೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ತಮ್ಮ ಶಿಕ್ಷಣದ ಜೊತೆ ಜೊತೆಗೆ ಹವ್ಯಾಸಿ ಕಲಾವಿದರಾಗಿಯೂ ತಮ್ಮ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ನಿರಂಜನ್ ಎನ್. ಚಿಪ್ಲುಂಕರ್, ಪ್ರಾಂಶುಪಾಲರು, NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ. ಡಾ. ನರಸಿಂಹ ಕೆ. ಬೈಲ್ಕೇರಿ, ಡೀನ್ ವಿದ್ಯಾರ್ಥಿ ಕಲ್ಯಾಣ, NMAMIT, ಕೃಷ್ಣರಾಜ ಜೋಯಿಸ್ ಎ., ಸಾರ್ವಜನಿಕ ಸಂಪರ್ಕ ಅಧಿಕಾರಿ, NMAMIT, ವರುಣ್ ಆಚಾರ್ಯ, ವಿದ್ಯಾರ್ಥಿ ಮುಖ್ಯಸ್ಥ, ಯಕ್ಷಗವಿಷ್ಟಿ 2026-27, ಪ್ರಣತಿ ಕಲ್ಲುರಾಯ, ಮುಖ್ಯಸ್ಥೆ ಯಕ್ಷಗವಿಷ್ಟಿ 2026-27 ಇದ್ದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕುರಿತು
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವನ್ನು 1986ಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE)ಮಾನ್ಯತೆ ಪಡೆದಿದೆ. ಜೂನ್ 2022 ರಿಂದ ಇದು ಮಂಗಳೂರಿನ ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರಕಟಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ NIRF 2025ಲ್ಲಿ ವಿಶ್ವವಿದ್ಯಾಲಯವು 80ನೇ ಸ್ಥಾನ ಪಡೆದಿದೆ.
ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳ ವಿನಿಮಯ, ಸಂಶೋಧನೆ, ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಹಲವು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಸಕ್ರಿಯ ಸಹಯೋಗವನ್ನು ಹೊಂದಿದೆ.
ಸಂಸ್ಥೆಯಲ್ಲಿ ಒಟ್ಟು 14 ಬಿ.ಟೆಕ್ ಪದವಿ ವಿಷಯಗಳು, 5 ಎಂ.ಟೆಕ್ ಮತ್ತು ಎಂಸಿಎ ಸ್ನಾತಕೋತ್ತರ ಕಾರ್ಯಕ್ರಮಗಳಿದ್ದು ಒಟ್ಟು 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಂಸ್ಥೆಯು ಉತ್ಸಾಹಭರಿತ ಮತ್ತು ಸಮೃದ್ಧ ಶೈಕ್ಷಣಿಕ ವಾತಾವರಣವನ್ನು ಒದಗಿಸುತ್ತಿದೆ. ಎಲ್ಲ ವಿಭಾಗಗಳಲ್ಲಿಯೂ ಅರ್ಹ ಸಂಶೋಧನಾ ಮಾರ್ಗದರ್ಶಕರಿದ್ದು, ಪಿಎಚ್.ಡಿ. ಪದವಿಗೆ ಕಾರಣವಾಗುವ ಡಾಕ್ಟೋರಲ್ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡುತ್ತಾರೆ.
125 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಸಂಸ್ಥೆಯ ಕ್ಯಾಂಪಸ್, ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಮತ್ತು ಪ್ರಶಾಂತ ಪರಿಸರದಲ್ಲಿ, ಕುದುರೆಮುಖ ಪರ್ವತಶ್ರೇಣಿಗಳಿಗೆ ತೆರಳುವ ಮಾರ್ಗದಲ್ಲಿದೆ. ಸಂಸ್ಥೆಗೆ ಸಮೀಪದ ವಿಮಾನ ನಿಲ್ದಾಣ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ೪೫ ಕಿ.ಮೀ. ದೂರದಲ್ಲಿದೆ. ಸಮೀಪದ ರೈಲು ನಿಲ್ದಾಣಗಳು ಉಡುಪಿ (40 ಕಿ.ಮೀ.) ಮತ್ತು ಮಂಗಳೂರು (50 ಕಿ.ಮೀ.) ಆಗಿವೆ. ಕೊಚ್ಚಿ–ಪಣವೆಲ್ ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಿಂದ ನಿಟ್ಟೆ 19 ಕಿ.ಮೀ. ದೂರದಲ್ಲಿದ್ದರೆ, ಮಂಗಳೂರು–ಸೊಲ್ಲಾಪುರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರಿಂದ 7 ಕಿ.ಮೀ. ದೂರದಲ್ಲಿದೆ.








































