ಬೆಂಗಳೂರು: ಪಂಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಕೊನೆಯ ದಿನಾಂಕವನ್ನು ನ. 10 ರ ವರೆಗೆ ವಿಸ್ತರಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೊದಲು ಅ. 20 ಕೊನೆಯ ದಿನವಾಗಿತ್ತು. ಆದರೆ ತಾಂತ್ರಿಕ ದೋಷ ಹಾಗೂ ಸಾರ್ವಜನಿಕರ ಪರದಾಟವನ್ನು ಗಮನಿಸಿ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ.
ಪಡಿತರ ಚೀಟಿಗೆ ಇ-ಕೆವೈಸಿ ಕಡ್ಡಾಯ ಮಾಡಿದಾಗಿನಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಗಂಟೆಗಟ್ಟಲೆ ಕ್ಯೂನಿಲ್ಲುವಂತಾಗಿತ್ತು. ಇದನ್ನು ತಪ್ಪಿಸಲು ಸರ್ಕಾರ ‘ಅನ್ನಸೇವೆ’ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿತ್ತಾದರೂ, ಅದರಲ್ಲಿ ತಾಂತ್ರಿಕ ಲೋಪದೋಷಗಳು ಕಂಡುಬಂದು ಸರ್ವರ್ ಕೈಕೊಟ್ಟಿತ್ತು. ಇದರಿಂದಾಗಿ ಸಾಮಾನ್ಯ ಜನರು ತೀವ್ರ ಪರದಾಟ ಅನುಭವಿಸುತ್ತಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಡೆಡ್ಲೈನ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಈಗಾಗಲೇ ಒಂದು ವರ್ಷಕ್ಕೂ ಮುಂಚೆ ಇ-ಕೆವೈಸಿ ಮಾಡಿಸಿರುವ 1,15,87,298 ಫಲಾನುಭವಿಗಳು ಮತ್ತೊಮ್ಮೆ ದೃಢೀಕರಣ ಮಾಡಿಸಬೇಕು. ಇದುವರೆಗೆ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3,82,362 ಜನ ತಕ್ಷಣವೇ ಮಾಡಿಸಬೇಕು. ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸದ 54,27,396 ಫಲಾನುಭವಿಗಳು ತಮ್ಮ ಆಧಾರ್ ವಿವರಗಳನ್ನು ನವೀಕರಿಸಬೇಕು.

ಕೆಲಸದ ನಿಮಿತ್ತ ಹೊರರಾಜ್ಯಗಳಿಗೆ ವಲಸೆ ಹೋಗಿರುವ ಕರ್ನಾಟಕದ ಪಡಿತರ ಚೀಟಿದಾರಿಗೆ ಇ-ಕೆವೈಸಿ ಮಾಡಿಸುವುದು ದೊಡ್ಡ ತಲೆನೋವಾಗಿತ್ತು. ಈಗ ಈ ಸಮಸ್ಯೆಯನ್ನು ನಿವಾರಿಸಲು ‘ಅನ್ನಸೇವೆ’ ಆ್ಯಪ್ ಸೇವೆಯನ್ನು ಇಡೀ ದೇಶಾದ್ಯಂತ ವಿಸ್ತರಿಸಲಾಗಿದೆ. ಹೊರರಾಜ್ಯಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಅಪ್ಡೇಟ್ ಮಾಡಿಕೊಂಡು, ಇದ್ದಲ್ಲಿಂದಲೇ ಇ-ಕೆವೈಸಿ ಪೂರ್ಣಗೊಳಿಸಬಹುದು.







































