ಸಾಹಿತ್ಯ ರಚನೆಯಲ್ಲಿ ಕೃತಿ ಚೌರ್ಯ ಸಲ್ಲದು, ನಿರಂತರ ಅಧ್ಯಯನಶೀಲತೆ ಅಗತ್ಯ: ಪಾಂಗಳ ಬಾಬು ಕೊರಗ

ಅಮೃತ ಭಾರತಿಯಲ್ಲಿ ಸಾಹಿತ್ಯ ಸಂಘ ಉದ್ಘಾಟನೆ, ಕವಿಗೋಷ್ಠಿ

ಕಾರ್ಕಳ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಸಾಹಿತ್ಯಾಸಕ್ತ ವಿದ್ಯಾರ್ಥಿಗಳಲ್ಲಿ ಓದು ಮತ್ತು ಬರವಣಿಗೆಯ ಅಭಿರುಚಿಯನ್ನು ಬೆಳೆಸುವ ಆಶಯದೊಂದಿಗೆ ನಡೆಯಿತು.

ಸಾಹಿತಿ ಹಾಗೂ ಸಂಶೋಧಕ ಪಾಂಗಳ ಬಾಬು ಕೊರಗ ಅವರು ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವವರು ಕೃತಿ ಚೌರ್ಯಕ್ಕೆ ಮುಂದಾಗಬಾರದು. ಸ್ವಂತ ಚಿಂತನೆ, ಅಧ್ಯಯನ ಮತ್ತು ಅನುಭವಗಳ ಆಧಾರದಲ್ಲಿ ಸಾಹಿತ್ಯವನ್ನು ರಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಸಾಹಿತ್ಯ ಸೃಷ್ಟಿಗೆ ನಿರಂತರ ಅಧ್ಯಯನಶೀಲತೆ ಅತ್ಯಗತ್ಯವಾಗಿದ್ದು, ಓದು ಮತ್ತು ಬರವಣಿಗೆಯ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಕೊರಗ ಸಮುದಾಯದ ಅಜಲು ಪದ್ಧತಿಯ ಹಿನ್ನೆಲೆ ಹಾಗೂ ಅದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಕುರಿತು ಅವರು ವಿವರಣೆ ನೀಡಿದರು. ಸಮಾಜದ ವಿವಿಧ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯ ಮತ್ತು ಸಂಶೋಧನೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ತಮ್ಮ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಿರಿತನ ಎಂಬುದು ಕೇವಲ ವಯಸ್ಸಿನಿಂದ ಬರುವುದಲ್ಲ; ಅದು ಓದು, ಜ್ಞಾನ ಮತ್ತು ಬರವಣಿಗೆಯ ಮೂಲಕ ರೂಪುಗೊಳ್ಳುತ್ತದೆ ಎಂದು ಹೇಳಿದರು‌.

ಅಧ್ಯಕ್ಷತೆ ವಹಿಸಿದ್ದ ಅಮೃತ ಭಾರತಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ ಅವರು ಮಾತನಾಡಿ, ಖ್ಯಾತ ಸಾಹಿತಿ ಭೈರಪ್ಪನವರ ಕೃತಿಗಳ ಶ್ರೇಷ್ಠತೆ ಹಾಗೂ ಅವುಗಳಲ್ಲಿರುವ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಸಾಹಿತ್ಯ ಕೃತಿಗಳು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಬದುಕಿನ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಎಂದು ತಿಳಿಸಿದರು. ಸಾಹಿತಿಗಳು ದೈಹಿಕವಾಗಿ ಅಗಲಿದರೂ ಅವರು ರಚಿಸಿದ ಕೃತಿಗಳು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಸಿಕೊಳ್ಳದಿದ್ದರೂ ಓದುವ ಹವ್ಯಾಸವನ್ನು ಎಂದಿಗೂ ಕೈಬಿಡಬಾರದು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ಉಪನ್ಯಾಸಕರಾದ ಶಯನ್ ಬನ್ನೂರು ಎಸ್. ವೈ. ಅವರು ರಚಿಸಿದ ‘ಅರಿವು’ ಪುಸ್ತಕದ ಪರಿಚಯವನ್ನು ಕನ್ನಡ ಉಪನ್ಯಾಸಕ ವೀಣೇಶ್ ಅಮೀನ್ ಅವರು ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ‘ಅರಿವು’ ಕೃತಿಯ ಲೇಖಕರಾದ ಶಯನ್ ಬನ್ನೂರು ಅವರನ್ನು ಗೌರವಿಸಲಾಯಿತು.

ಬಳೀಕ ಕವಿಗೋಷ್ಠಿ ನಡೆಯಿತು. ವಿದ್ಯಾರ್ಥಿಗಳಾದ ತಸ್ವಿ, ಹರ್ಷಿತಾ, ಸಿದ್ದಮ್ಮ, ಮಾನ್ಯ, ಯೋಗೀಶ್, ಸ್ತುತಿ ಹಾಗೂ ಅಂಕಿತ್ ತಮ್ಮ ಕವನಗಳನ್ನು ವಾಚಿಸಿಶಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಮತ್ತುಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಪೂರ್ವಿ, ಹಂಸಿನಿ ಹಾಗೂ ರಕ್ಷಿತಾ ನಾಡಗೀತೆ ಹಾಡಿದರು. ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿದರು. ಪ್ರತೀಕ್ಷಾ ನಿರೂಪಿಸಿ, ವಂದಿಸಿದರು.















































































error: Content is protected !!
Scroll to Top