ನವದೆಹಲಿ: ನಿತ್ಯ ಬಳಕೆಯ ಹಾಲು, ಪನೀರ್, ಮಾಂಸದಂತಹ ಆಹಾರ ಪದಾರ್ಥಗಳು ಕೈ ಸೇರುವ ಮೊದಲೇ ಹಾಳಾಗುತ್ತಿದ್ದು, ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಹೆಜ್ಜೆ ಇರಿಸಿದೆ.
ಕೋವಾ, ಪನೀರ್, ಮಾಂಸ ಮತ್ತು ಮೀನಿನಂತಹ ಬೇಗನೆ ಕೊಳೆಯುವ ಆಹಾರ ಪದಾರ್ಥಗಳನ್ನು ಸಂಗ್ರಹಿಸುವಾಗ ಮತ್ತು ಸಾಗಿಸುವಾಗ ಕಡ್ಡಾಯವಾಗಿ ನಿಗದಿತ ತಾಪಮಾನವನ್ನು ಕಾಯ್ದುಕೊಳ್ಳಬೇಕು ಎಂದು ಎಫ್ಎಸ್ಎಸ್ಎಐ ಎಲ್ಲಾ ಆಹಾರ ಉದ್ಯಮಿಗಳಿಗೆ (FBOs) ಖಡಕ್ಕಾಗಿ ಸೂಚಿಸಿದೆ. ಅ. 15 ರ್ಂದ ಈ ಹೊಸ ಮಾರ್ಗಸೂಚಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಹೊರಡಿಸಲಾಗಿದೆ.
ಆಹಾರವನ್ನು ಸಾಗಿಸಲು ಕೇವಲ ಮುಚ್ಚಲ್ಪಟ್ಟ, ಸ್ವಚ್ಛವಾದ ಮತ್ತು ಸುರಕ್ಷಿತವಾದ ವಾಹನಗಳನ್ನು ಮಾತ್ರ ಬಳಸಬೇಕು. ಮಾಂಸ ಅಥವಾ ಪನೀರ್ ಮುಂತಾದವುಗಳನ್ನು ಪ್ಯಾಕ್ ಮಾಡಲು ಇನ್ಮುಂದೆ ಹಳೆಯ ಗೋಣಿಚೀಲಗಳನ್ನು ಬಳಸುವಂತಿಲ್ಲ. ಕೇವಲ ಫುಡ್-ಗ್ರೇಡ್ ಪ್ಯಾಕೇಜಿಂಗ್ ವಸ್ತುಗಳನ್ನು ಮಾತ್ರ ಬಳಸಬೇಕು. ಸಾಗಾಟ ಮತ್ತು ಲೋಡಿಂಗ್ ಮಾಡುವಾಗ ಧೂಳು, ತೇವಾಂಶ, ಕೀಟಗಳು ಮತ್ತು ದೈಹಿಕ ಹಾನಿಯಾಗದಂತೆ ಆಹಾರವನ್ನು ರಕ್ಷಿಸುವುದು ಕಡ್ಡಾಯ. ಪ್ರತಿಯೊಂದು ಆಹಾರದ ಲೀಟರ್ ಮತ್ತು ತೂಕದ ಇನ್ವಾಯ್ಸ್ (ಬಿಲ್) ಮತ್ತು ಸಾಗಾಟದ ದಾಖಲೆಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಅಧಿಕಾರಿಗಳು ಕೇಳಿದ ತಕ್ಷಣ ಅದನ್ನು ಹಾಜರುಪಡಿಸಬೇಕು ಎಂಬ ನಿಯಮಗಳ ಪಾಲನೆ ಕಡ್ಡಾಯ ಎಂದು ಸೂಚಿಸಿದೆ.

ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ರೈಲ್ವೆಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ. ತಪಾಸಣೆ ವೇಳೆ ಯಾವುದೇ ಆಹಾರ ಉದ್ಯಮಿ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ, ಅಂತಹ ಆಹಾರ ಪದಾರ್ಥಗಳನ್ನು ತಕ್ಷಣವೇ ಜಪ್ತಿ ಮಾಡಲಾಗುವುದು ಎಂದು ಎಫ್ಎಸ್ಎಸ್ಎಐ ಎಚ್ಚರಿಕೆ ನೀಡಿದೆ.







































