ಮೊಬೈಲ್‌ನಲ್ಲಿ ಸೌಂಡ್ ಹೆಚ್ಚಾದ್ರೆ ‌ರೈಲು ಪ್ರಯಾಣಿಕರಿಗೆ ದಂಡ, ಜೈಲು ಶಿಕ್ಷೆ

ಸಾರ್ವಜನಿಕರಿಗೆ ತೊಂದರೆ ಮಾಡಿದವರ ವಿರುದ್ಧ ಹದ್ದಿನಕಣ್ಣಿರಿಸಲಿದೆ ಭಾರತೀಯ ರೈಲ್ವೆ

ಮಂಗಳೂರು: ಜೋರಾಗಿ ಸೌಂಡ್ ಇಟ್ಟು ರೈಲಿನಲ್ಲಿ ರೀಲ್ಸ್ ‌ನೋಡುತ್ತಾ ಬೇರೆಯವರಿಗೆ ತೊಂದರೆ ಮಾಡುವವರಿಗೆ ಗುದ್ದು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

ರೈಲಿನ ಬೋಗಿಯಲ್ಲಿ ಇಯರ್‌ಫೋನ್‌ಗಳಿಲ್ಲದೆ ರೀಲ್ಸ್ ವೀಕ್ಷಿಸುವುದು, ಫೋನ್‌ನಲ್ಲಿ ಜೋರಾಗಿ ದೀರ್ಘಕಾಲ ಮಾತನಾಡುವುದು, ಇಯರ್‌ಫೋನ್‌ಗಳನ್ನು ಬಳಸದೆ ಆಡಿಯೋ ಪ್ಲೇ ಮಾಡುವುದು ಅಥವಾ ಫೋನ್ನಲ್ಲಿ ಜೋರಾಗಿ ಮಾತನಾಡುವುದು ಅಥವಾ ಸ್ಪೀಕರ್ ಮೋಡ್ ನಲ್ಲಿ ಮಾತನಾಡುವುದು ದಂಡಕ್ಕೆ ಮತ್ತು ಕೆಲವು ಸಂದರ್ಭಗಳಲ್ಲಿ ಜೈಲು ಶಿಕ್ಷೆಗೂ ಕಾರಣವಾಗಬಹುದು ಎಂದು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

ಮೊಬೈಲ್ ಫೋನ್‌ಗಳನ್ನು ಸ್ಪೀಕರ್ ಮೋಡ್‌ನಲ್ಲಿ ಬಳಸಿ ಮತ್ತು ಜೋರಾಗಿ ಮಾತನಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ವ್ಯಕ್ತಿಯನ್ನು ರೈಲ್ವೇ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ರೈಲ್ವೇ ಆವರಣದಿಂದ ಹೊರಹಾಕಲು ಮತ್ತು 1,000 ರೂ.ಗಳ ದಂಡ ವಿಧಿಸಲು ಅವಕಾಶವಿದೆ. ಎಚ್ಚರಿಕೆ ನೀಡಿದರೂ ವ್ಯಕ್ತಿಯು ತೊಂದರೆ ನೀಡುವುದನ್ನು ಮುಂದುವರಿಸಿದರೆ ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಮತ್ತು ಅಥವಾ 5,000 ರೂ. ದಂಡ ವಿಧಿಸಲಾಗುವುದು ಎಂದು ರೈಲ್ವೇ ಮಾಹಿತಿ ನೀಡಿದೆ.

ಈ ಕ್ರಮವು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 145(2) ಆಧರಿಸಿದೆ; ಇದು ಇತರರಿಗೆ ಉಪದ್ರ ಅಥವಾ ತೊಂದರೆ ಉಂಟುಮಾಡುವ ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಇಂತಹ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ಮೊದಲೇ ಅವಕಾಶವಿತ್ತಾದರೂ, ಅದಕ್ಕೆ ವಿಧಿಸಬೇಕಾದ ದಂಡದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ. ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯಿದೆ 2026ಯಲ್ಲಿ ಇದೀಗ ದಂಡಕ್ಕೆ ಅವಕಾಶ ನೀಡಲಾಗಿದೆ.

ಇಯರ್‌ಫೋನ್‌ಗಳನ್ನು ಬಳಸಲು ಅನುಮತಿಯಿದೆ. ಇತರರಿಗೆ ತೊಂದರೆಯಾಗದ ಹೊರತು, ವೀಡಿಯೊಗಳನ್ನು ನೋಡುವುದು, ಸಂಗೀತ ಕೇಳುವುದು ಮತ್ತು ಕರೆಗಳನ್ನು ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.















































































error: Content is protected !!
Scroll to Top