ದೇಶದ ಏಕತೆ, ಸೌಹಾರ್ದತೆ ಕಾಪಾಡುವಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಕರೆ

ನಾಗ್ಪುರ: ದೇಶದ ಏಕತೆ ಮತ್ತು ಸೌಹಾರ್ದತೆ ಕಾಪಾಡುವಂತೆ ಜನರಿಗೆ ಆರ್ ಎಸ್‌ ಎಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.

ಅವರು ವಿಜಯದಶಮಿಯಂದು ಆರ್‌ಎಸ್‌ಎಸ್‌ ವಾರ್ಷಿಕ ಹಿನ್ನೆಲೆ ಮಾತನಾಡಿ, ಇತ್ತೀಚೆಗೆ ಫ್ರಾನ್ಸ್, ಆಲ್ವೇನಿಯಾ, ಬಾಂಗ್ಲಾದೇಶ ಹಾಗೂ ನೇಪಾಲದಲ್ಲಿ ನಡೆದ ಹಿಂಸಾಚಾರ ಮತ್ತು ರಾಜಕೀಯ ಅಸ್ಥಿರತೆಯ ಘಟನೆಗಳನ್ನು ಉಲ್ಲೇಖಿಸಿ ಭಾರತದಲ್ಲೂ ಇಂತಹ “ಆಡಳಿತ ಬದಲಾವಣೆ” ಮಾಡುವ ಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ಗೊಂದಲದ ಗಾಳಿ ಪಾಶ್ಚಿಮಾತ್ಯ ದೇಶಗಳಿಂದ ಬೀಸುತ್ತಿದ್ದು, ಭಾರತದಲ್ಲೂ ಅಶಾಂತಿ ಹಬ್ಬಿಸಲು ಪ್ರಯತ್ನಗಳು ನಡೆಯುತ್ತಿವೆ ಆದರೆ ಭಾರತವು ದೃಢ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿದ್ದು, ಇಲ್ಲಿ ಆಡಳಿತ ಬದಲಾವಣೆಯ ತಂತ್ರಗಳು ಯಶಸ್ವಿಯಾಗುವುದಿಲ್ಲ ಎಂದು ಅವರು ವಿಶ್ವಾಸದಿಂದ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ನಡೆಯುವುದು ಸಹಜ, ಆದರೆ ಅವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಿರಬೇಕೇ ಹೊರತು ಸಮಾಜದಲ್ಲಿ ದ್ವೇಷ ಬಿತ್ತುವಂತಿರಬಾರದು. ಯಾವುದೇ ಹೋರಾಟಗಳು ಮತಬ್ಯಾಂಕ್ ರಾಜಕಾರಣ ಅಥವಾ ಅಗ್ಗದ ಜನಪ್ರಿಯತೆಗಾಗಿ ನಡೆಯಬಾರದು. ಕೇವಲ ಹೋರಾಟಗಳಿಂದ ಪರಿಹಾರ ಸಿಗುವುದಿಲ್ಲ, ಬದಲಿಗೆ ಸಮಾಜದಲ್ಲಿ ಸೌಹಾರ್ದಯುತ ಸಂವಾದ ನಡೆಸಿದಾಗ ಮಾತ್ರ ನೈಜ ಪರಿಹಾರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವು ಶಕ್ತಿಗಳು ಜನರ ಮನಸ್ಸಿನಲ್ಲಿ ಸಂತ್ರಸ್ತ ಭಾವನೆಯನ್ನು ಮೂಡಿಸಿ, ಅಸಮಾಧಾನ ಮತ್ತು ಗೊಂದಲವನ್ನು ಸೃಷ್ಟಿಸಲು ನಿರಂತರವಾಗಿ ಕೆಲಸ ಮಾಡುತ್ತಿವೆ. ಇಂತಹ ವಿಭಜಕ ಶಕ್ತಿಗಳ ಬಲೆಗೆ ಬೀಳದೆ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು ಎಂದು ಹೇಳಿದರು.

ದೇಶವನ್ನು ‘ವಿಶ್ವಗುರು’ ಸ್ಥಾನದಲ್ಲಿ ನಿಲ್ಲಿಸುವ ಗುರಿಯನ್ನು ಮುನ್ನಿಟ್ಟುಕೊಂಡು, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಅಹಂ, ಪೂಜಾ ಪದ್ಧತಿಗಳ ಬಗೆಗಿನ ಭಿನ್ನಾಭಿಪ್ರಾಯ ಮತ್ತು ವೈವಿಧ್ಯತೆಯನ್ನು ಪ್ರತ್ಯೇಕತೆ ಎಂದು ನೋಡುವ ಮನಸ್ಥಿತಿಯನ್ನು ತೊರೆಯಬೇಕು. ಭಾರತದ ಮೇಲಿನ ಭಕ್ತಿ, ಪೂರ್ವಜರ ಬಗೆಗಿನ ಹೆಮ್ಮೆ ಮತ್ತು ಭಾರತೀಯ ಸಂಸ್ಕೃತಿಗೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕೆಂದು ಅವರು ನುಡಿದರು.















































































error: Content is protected !!
Scroll to Top