ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಅವರು ನಾಮನಿರ್ದೇಶನಗೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ಜ್ಯೇಷ್ಠತೆ ಮೇರೆಗೆ ಮುಂದಿನ ಒಂದು ವರ್ಷದ ಅವಧಿಗೆ ಡಾ. ಮಂಜುನಾಥ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ 36 ವರ್ಷಗಳಿಂದ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ, 2016ರಿಂದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಕಳದ ನಿವಾಸಿಯಾಗಿರುವ ಕೋಟ್ಯಾನ್ ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ಬಳಿಕ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 1991ರಲ್ಲಿ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 2003ರಲ್ಲಿ ಮಂಗಳೂರು ವಿವಿಯಿಂದ ಪಿಎಚ್ಡಿ ಪದವಿ ಪಡೆದಿರುತ್ತಾರೆ.
ಕೋಟ್ಯಾನ್ ಕಾಳಜಿ
ಶ್ರೀ ಭುವನೇಂದ್ರ ಕಾಲೇಜಿಗೆ ಸೇರಿದ ಯಾವೊಬ್ಬ ವಿದ್ಯಾರ್ಥಿಯೂ ಆರ್ಥಿಕ ಕಾರಣಕ್ಕಾಗಿ ಶಿಕ್ಷಣವನ್ನು ಮೊಟಕುಗೊಳಿಸದಂತೆ ನೋಡಿಕೊಂಡ ಹೆಗ್ಗಳಿಕೆ ಡಾ. ಮಂಜುನಾಥ್ ಕೋಟ್ಯಾನ್ ಅವರದ್ದು. ಕಡುಬಡತನದಲ್ಲೇ ಕಲಿತಿರುವ ಕೋಟ್ಯಾನ್ ಅವರು ಬಡತನದಿಂದಾಗಿ ತಮ್ಮ ಕಾಲೇಜಿನ ವಿದ್ಯಾರ್ಥಿಯ ಕಲಿಕೆಗೆ ತೊಂದರೆಯಾಗದಂತೆ ಆಸ್ಥೆ ವಹಿಸಿರುವುದು ಉಲ್ಲೇಖನೀಯ.








































