ಬೆಂಗಳೂರು: ಕಾಂಗ್ರೆಸ್ ಹಾಗೂ ಕಾಕ್ರೋಚ್ ಪಾರ್ಟಿ ದೇಶಾದ್ಯಂತ ನಡೆಸುತ್ತಿರುವ ‘ಆಡಳಿತ ಬದಲಾವಣೆ’ ಅಭಿಯಾನಕ್ಕೆ ವಿಜಯದಶಮಿ ಮರುದಿನವೇ ಟಕ್ಕರ್ ನೀಡುವುದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕತ್ವ ತೀರ್ಮಾನಿಸಿದ್ದು, ರಾಜ್ಯದಲ್ಲಿ ಗುರುವಾರದಿಂದಲೇ ‘ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಹೋರಾಟ ನಡೆಸುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ಹೋರಾಟವನ್ನು ಕರ್ನಾಟಕದಲ್ಲಿ ತೀವ್ರ ಸ್ವರೂಪದಲ್ಲಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಅ.22ರಿಂದ ನ.5ರ ವರೆಗೆ ರಾಜ್ಯದ 15ರಿಂದ 20 ಜಿಲ್ಲೆಗಳಲ್ಲಿ ಪಾದಯಾತ್ರೆ ಹಾಗೂ ಯುವ ಸಂವಾದವನ್ನು ನಡೆಸುವ ತೀರ್ಮಾನಕ್ಕೆ ಬಂದಿರುವ ಬಿಜೆಪಿ, ಕಾರ್ಕೊಚ್ ಪಕ್ಷದ ತಂತ್ರಕ್ಕೆ ಮದ್ದರೆಯಲು ನಿರ್ಧರಿಸಿದೆ.
ರಾಜ್ಯದಲ್ಲಿ ನಡೆಯುವ ಈ ಹೋರಾಟದ ಉಸ್ತುವಾರಿಯನ್ನು ಇತ್ತೀಚೆಗಷ್ಟೇ ಕರ್ನಾಟಕ ಉಸ್ತುವಾರಿಯಾಗಿ ನೇಮಕಗೊಂಡಿರುವ ಹರೀಶ್ ದ್ವಿವೇದಿ ಖುದ್ದು ನಿಭಾಯಿಸಲಿದ್ದಾರೆ. ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸುವುದಕ್ಕೆ ಮುನ್ನವೇ ಹೋರಾಟದ ಹೊಣೆಗಾರಿಕೆಯನ್ನು ದ್ವಿವೇದಿ ವಹಿಸಿಕೊಂಡಿದ್ದಾರೆ. ಈ ಸಂಬಂಧ ಮಂಗಳವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ಮುಖಂಡರ ಜತೆಗೆ ದ್ವಿವೇದಿ ಆನ್ಲೈನ್ ಸಭೆಯನ್ನೂ ನಡೆಸಿದ್ದು, ರಾಜ್ಯ ನಾಯಕತ್ವಕ್ಕೆ ಹೊಸ ಟಾಸ್ಕ್ ನೀಡಿದ್ದಾರೆ.

ಕಾಕ್ರೋಚ್, ಕಾಂಗ್ರೆಸ್ ಸೃಷ್ಟಿಸಿದ ನರೇಟಿವ್ಗಳಿಗೆ ಜೆನ್ಜಿ ಸಮುದಾಯ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ತಜ್ಞರ ತಂಡವನ್ನು ರಚನೆ ಮಾಡಿ ತಿರುಗೇಟು ನೀಡುವ ತಂತ್ರಗಾರಿಕೆ ನಡೆಸಲು ಸೂಚಿಸಲಾಗಿತ್ತು. ಇದರ ಫಲವಾಗಿ ‘ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನವನ್ನು ಸಿದ್ಧಗೊಳಿಸಲಾಗಿದ್ದು, ಎಲ್ಲ ರಾಜ್ಯಗಳಲ್ಲೂ ಇದು ನಡೆಯಲಿದೆ. ಕರ್ನಾಟಕದ 15-20 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ. ಕಾಂಗ್ರೆಸ್ ಪ್ರಾಯೋಜಿತ ನರೇಟಿವ್ಗಳು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಯುವ ಸಂವಾದ, ಗೋಷ್ಠಿಗಳು, ಚರ್ಚೆ ಸೇರಿದಂತೆ ಅನೇಕ ಚಟುವಟಿಕೆಯನ್ನು ನಡೆಸಲಾಗುತ್ತದೆ. ಇದು ಮೊದಲ ಹಂತದಲ್ಲಿ ನಡೆಯುವ ಪ್ರಕ್ರಿಯೆಗಳಾಗಿದ್ದು, ಜೆನ್ ಜಿ ಸೇರಿದಂತೆ ಎಲ್ಲ ವರ್ಗಗಳಲ್ಲಿ ಬಿಜೆಪಿ ಕುರಿತು ಸದಾಭಿಪ್ರಾಯ ರೂಪಿಸುವುದೇ ಈ ಹೋರಾಟದ ಉದ್ದೇಶವಾಗಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.







































