ಮತದಾನ ಮಾಡದವನಿಗೆ ಜನಪ್ರತಿನಿಧಿಯನ್ನು ಪ್ರಶ್ನಿಸುವ ನೈತಿಕತೆ ಇಲ್ಲ
ಕಾರ್ಕಳ: ವಿದ್ಯಾವಂತರು ಕಸ ಎಸೆದು ಶಿಕ್ಷಣವಿಲ್ಲದವರು ಅದನ್ನು ಸ್ವಚ್ಛಗೊಳಿಸಿದಾಗ ವಿದ್ಯೆಗೆ ಏನು ಬೆಲೆ ಉಳಿದೀತು? ಅಂತೆಯೇ ಮತದಾನ ದಿನ ಮತ ಚಲಾಯಿಸದೇ ಇದ್ದರೆ ವಿದ್ಯಾವಂತರಾದರೇನು ಫಲ? ನಮ್ಮ ಹಿರಿಯರು, ವಿಕಲಚೇತನರು, ಅನಾರೋಗ್ಯ ಪೀಡಿತರು ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವಾಗ ಎಲ್ಲವೂ ಸರಿ ಇದ್ದರೂ ಮತದಾನದ ಕುರಿತು ನಿರಾಸಕ್ತಿ ಹೊಂದುವ ಪ್ರಜೆಗಳನ್ನು ನೋಡುವಾಗ ಮರುಕ ಉಂಟಾಗುತ್ತಿದೆ. ಕೆಲವರಿಗೆ ಅನಾಸಕ್ತಿ, ಮತ್ತೆ ಕೆಲವರಿಗೆ ಯಾರು ಬಂದರೆ ನಮಗೇನು ಎಂಬ ಧೋರಣೆ, ಕೆಲವರಿಗೆ ಯಾರು ಗೆದ್ದರೂ ಯಾರು ಸೋತರೂ ನನ್ನ ಹೊಟ್ಟೆ ತುಂಬಿಸಲು ನಾನು ದುಡಿಯಲೇಬೇಕಲ್ಲ ಎಂಬ ಪೊಳ್ಳು ವೇದಾಂತ, ಕೆಲವರಿಗೆ ನನ್ನ ಒಂದು ಮತದಿಂದ ಯಾವ ಬದಲಾವಣೆ ಆದೀತು ಎಂಬ ಅಜ್ಞಾನ.
ಮತದಾನದ ಕುರಿತು ಚುನಾವಣಾ ಆಯೋಗ ಅದೆಷ್ಟೇ ಜಾಗೃತಿ ಮೂಡಿಸಿದರೂ ಇಂದಿನ ದಿನಗಳಲ್ಲೂ ಮತದಾನದಿಂದ ದೂರವುಳಿಯುವವರು ದೊಡ್ಡ ಪ್ರಮಾಣದಲ್ಲಿ ಇರುವುದು ವಿಪರ್ಯಾಸ. ಅದೆಷ್ಟೋ ಮಂದಿಗೆ ಏಕೆ ಮತ ನೀಡುತ್ತಿದ್ದೇವೆ ಎಂದೇ ತಿಳಿದಿರುವುದಿಲ್ಲ. ಮತದಾನ ಮತ್ತು ಚುನಾವಣೆ ನಿಜಕ್ಕೂ ಆದರ್ಶಮಯ ವ್ಯವಸ್ಥೆಯಾಗಿದೆ. ಇಲ್ಲಿ ಒಳ್ಳೆಯವರ ಆಯ್ಕೆಗೆ ಸಾಕಷ್ಟು ಅವಕಾಶವಿದೆ. ಮತಕ್ಕಿರುವ ಮಹತ್ವ ಅದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಆಗಿದೆ. ಈ ವಿಚಾರದಲ್ಲಿ ನಮಗೆ ಎಚ್ಚರಿಕೆ ಇಲ್ಲದಿದ್ದರೆ ಚುನಾವಣೆಯ ಮೂಲ ಉದ್ದೇಶವೇ ವಿಫಲವಾಗುವ ಸಂಭವವಿದೆ. ಮತದಾನ ಮಾಡದ ವ್ಯಕ್ತಿಗೆ ಜನಪ್ರತಿನಿಧಿಯನ್ನು ಪ್ರಶ್ನಿಸುವ ನೈತಿಕತೆಯೂ ಇರುವುದಿಲ್ಲ. ಮತದಾನ ಎನ್ನುವುದು ಕೇವಲ ಒಂದು ಕೆಲಸವಲ್ಲ, ಅದು ಒಂದು ಹಕ್ಕು, ಕರ್ತವ್ಯ, ನಮ್ಮ ಹೆಮ್ಮೆ ಕೂಡಾ ಹೌದು.
ನಮ್ಮ ದೇಶದಲ್ಲಿ ಶೇ. 90ರಷ್ಟು ಜನರಿಗೆ ತಮ್ಮ ಮತಾಧಿಕಾರದ ನಿಜವಾದ ಬೆಲೆ ತಿಳಿಯದು. ತಾವು ಆರಿಸುವುದು ನಾಯಕರನ್ನಲ್ಲ ನಮ್ಮ ಸೇವಕರನ್ನು ಎನ್ನುವ ಕನಿಷ್ಟ ಜ್ಞಾನವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಆಯ್ಕೆಯು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಶೇ.60ರಿಂದ 65 ಮತದಾನ ನಡೆದಾಗ ಅದನ್ನು ಭಾರಿ ಮತದಾನ ಎಂದು ಭಾವಿಸಿ ಹೆಚ್ಚು ಕಮ್ಮಿ ಅರ್ಧದಷ್ಟು ಮತದಾರರು ಚುನಾವಣಾ ಪ್ರಕ್ರಿಯೆಯಿಂದ ಹೊರಗಿರುವುದು ನಮ್ಮ ಚುನಾವಣಾ ಪದ್ಧತಿಯಲ್ಲಿರುವ ಲೋಪಕ್ಕೆ ಹಿಡಿದ ಕೈಗನ್ನಡಿ. ಮತದಾರರೆಲ್ಲರೂ ಚುನಾವಣೆಯ ಮಹತ್ವ ಅರಿತುಕೊಂಡು ಪ್ರಜಾಪ್ರಭುತ್ವಕ್ಕೆ ನ್ಯಾಯವನ್ನು ಒದಗಿಸುವಂತಾದಾಗ ಸಂವಿಧಾನಕ್ಕೆ ನಾವು ಕೊಡುವ ಬಹುದೊಡ್ಡ ಗೌರವವೇ ಸರಿ.

ಗರಿಷ್ಠ ಮತದಾನ ಕಾರ್ಕಳ ಹಿರಿಮೆ
ನಿಮಗಿದು ಗೊತ್ತೇ? ನಮ್ಮ ಹಳ್ಳಿಗಳಿಗಿಂತ ನಗರದಲ್ಲಿ ಮತದಾನ ಪ್ರಮಾಣ ಕಡಿಮೆ. ಹಳ್ಳಿಯ ಜನರು ಉದ್ಯೋಗದ ನಿಮಿತ್ತ ನಗರದ ಕಡೆಗೆ ವಲಸೆ ಹೋದರು ಮತದಾನದ ಪ್ರಮಾಣದಲ್ಲಿ ಹಳ್ಳಿಯವರು ಮುಂದಿರುವುದು ನಿಜಕ್ಕೂ ಆದರ್ಶನೀಯ. ಇದಕ್ಕೆ ಹೆಮ್ಮೆ ನಮ್ಮ ಕಾರ್ಕಳ ವಿಧಾನಸಭಾ ಕ್ಷೇತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 78.39ರಷ್ಟು ಮತದಾನ ಮಾಡುವ ಮೂಲಕ ಉಡುಪಿ ಜಿಲ್ಲೆಯಲ್ಲೇ ಅಗ್ರಸ್ಥಾನಿಯಾಗಿ ಬುದ್ಧಿವಂತರ ಜಿಲ್ಲೆಯಲ್ಲಿ ಕಾರ್ಕಳದ ಮತದಾರರೇ ಬುದ್ಧಿವಂತರು ಎಂದು ನಿರೂಪಿಸಿದ್ದಾರೆ. ಈ ಬಾರಿಯೂ ಕಾರ್ಕಳ ಆ ದಿಸೆಯಲ್ಲಿ ಮುಂದುವರಿಯಲಿ ಎಂಬುದೇ ಆಶಯ.

ಶೈಲೇಶ್ ಶೆಟ್ಟಿ, ಬೈಲೂರು



































































