ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಈ ಕ್ರಮ
ಮಂಗಳೂರು: ಗಣೇಶೋತ್ಸವದ ಹಿನ್ನೆಲೆ ಯಾವುದೇ ಗಲಭೆ – ಗೊಂದಲಗಳು, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ.
ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಠಾಣಾ ವ್ಯಾಪ್ತಿಗಳ ವಿವಿಧ ಕಡೆಗಳಲ್ಲಿ ಗಣೇಶ ಚತುರ್ಥಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ಘಟಕದಿಂದ 778 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ 1 ಹೆಚ್ಚುವರಿ ಪೊಲೀಸ್ ಅಧೀಕ್ಷಕ, 4 ಡಿವೈಎಸ್ಪಿ 7 ಪಿ/ಸಿಪಿಐ, 34 ಪಿಎಸ್‌ಐ, 52 ಎಎಸ್‌ಐ, 520 ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಇದರ ಜೊತೆಗೆ 150 ಗೃಹರಕ್ಷಕರು ಕರ್ತವ್ಯಕ್ಕೆ ನಿಯೋಜನೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ 5 ಕೆಎಸ್‌ಆರ್‌ಪಿ ತುಕಡಿಗಳು, 5 ಡಿಎಆರ್ ತುಕಡಿಗಳನ್ನೂ ನಿಯೋಜನೆ ಮಾಡಲಾಗುತ್ತಿದೆ. ಶಾಂತಿಯುತವಾಗಿ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯುವಂತೆ ಮಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಈ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.


























