ಕಾರ್ಕಳದ ಆಯುಷ್‌ ಶೆಟ್ಟಿ ಸಹಿತ ಏಷ್ಯನ್‌ ಗೇಮ್ಸ್‌ ಸಾಧಕರಿಗೆ ಸಿ.ಎಂ ಗೌರವ

ಬೆಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿರುವ ಕರ್ನಾಟಕದ ಕ್ರೀಡಾಪಟುಗಳನ್ನು ಸಿ ಎಂ ಡಿಕೆ ಶಿವಕುಮಾರ್ ಸನ್ಮಾನಿಸಿ, ಅಭಿನಂದಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಅದ್ಭುತ ಸಾಧನೆ ತೋರಿದಿದ್ದಾರೆ ಎಂದು ಸಿಎಂ ಡಿಕೆಶಿ ಹೊಗಳಿದ್ದಾರೆ.

ರಾಜ್ಯದ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ, ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಗತ್ಯ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 50 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುತ್ತಿತ್ತು. ಆದರೆ ಇದೀಗ ಚಿನ್ನದ ಪದಕ ವಿಜೇತರಿಗೆ ಒಂದು ಕೋಟಿ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ ಮತ್ತು ಕಂಚಿನ ಪದಕ ಗೆದ್ದರೆ 50 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುತ್ತಿದೆ.

ಈ ಬಾರಿ ಎಂಟು ಮಂದಿಗೆ ಈ ನಗದು ಪುರಸ್ಕಾರ ಸಿಗಲಿದ್ದು, ಜೊತೆಗೆ ಈ ಎಂಟು ಪದಕ ವಿಜೇತರಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಿದ್ದಕ್ಕಾಗಿ, ಪದಕ ಸಾಧನೆಗೆ ನೀಡಲಾಗುವ ನಗದು ಪುರಸ್ಕಾರದ ಹೆಚ್ಚುವರಿಯಾಗಿ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವುದೇ ಮಹತ್ವದ ಸಾಧನೆಯಾಗಿದ್ದು, ಪದಕ ಗಳಿಸಿದವರ ಜೊತೆಗೆ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳನ್ನೂ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

2026ರ ಏಷ್ಯನ್‌ ಗೇಮ್ಸ್‌ನಲ್ಲಿ ಅದ್ಭುತ ಸಾಧನೆಗೈದು, ನಾಡಿಗೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳಾದ ಮೋಹಿತ್‌ ಎಚ್.‌ ಎಸ್.‌, ಅದಿತಿ ಅಶೋಕ್‌, ಪೂವಮ್ಮ, ಕಾರ್ಕಳದ ಆಯುಷ್‌ ಶೆಟ್ಟಿ, ತಿಲೋತ್ತಮಾ ಸೇನ್, ಶ್ರೇಯಾಂಕ ಪಾಟೀಲ್ ಹಾಗೂ ಸ್ನೇಹ ಎಸ್.‌ ಎಸ್. ಅವರನ್ನು ಇಂದು ವಿಧಾನಸೌಧದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಈ ವೇಳೆ ಕರ್ನಾಟಕ ಒಲಂಪಿಕ್‌ ಒಕ್ಕೂಟದ ಅಧ್ಯಕ್ಷ ಡಾ. ಕೆ. ಗೋವಿಂದರಾಜ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎಂ. ಎನ್. ಅನುಚೇತ್‌ ಮತ್ತಿತರರು ಉಪಸ್ಥಿತರಿದ್ದರು.





























































































































error: Content is protected !!
Scroll to Top