ಹೆಣ್ಣಿನ ಮೋಹಕ್ಕೆ ಬಿದ್ದು ಅಪರಾಧಿಯನ್ನು ಅವಧಿಗೂ ಮೊದಲೇ ಬಿಡುಗಡೆಗೊಳಿಸಿದ ಜೈಲು ಡಿಐಜಿ

ಎಂಟು ವರ್ಷಗಳ ಹಿಂದಿನ ಪ್ರಕರಣ ಈಗ ಬೆಳಕಿಗೆ

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದ ಇನ್ನೊಂದು ಘಟನೆ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ನಡೆದಿದ್ದು, ಪೊಲೀಸ್‌ ಇಲಾಖೆ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ. ಡಿಐಜಿ ದರ್ಜೆಯ ಉನ್ನತ ಅಧಿಕಾರಿಯೇ ಹೆಣ್ಣಿನ ಮೋಹಕ್ಕೆ ಬಿದ್ದು, ಸುಪ್ರೀಂ ಕೋರ್ಟಿನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ಅವಧಿಗೂ ಮೊದಲೇ ಬಿಡುಗಡೆಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಡಿಐಜಿ ಮತ್ತು ಇದಕ್ಕೆ ಸಹಕರಿಸಿದ ಇತರರನ್ನು ಪೊಲೀಸರು ಬಂಧಿಸಿದ್ದಾರೆ.

2018ರಲ್ಲಿ ಸುಪ್ರಿಂಕೋರ್ಟ್ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿ ಶಂಕರ್ ಎಂಬಾತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಸಂಬಂಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯದಲ್ಲಿ ಶಾಮೀಲಾಗಿರುವ ಆರೋಪದಡಿ ಅಂದಿನ ಜೈಲು ಮುಖ್ಯ ಅಧೀಕ್ಷಕ ಹಾಗೂ ಹಾಲಿ ಕಲಬುರಗಿಯ ಜೈಲು ಡಿಐಜಿ ‎ಎಂ.ಸೋಮಶೇಖರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಒಂದು ಹೆಣ್ಣಿನ ಆಸೆಗೆ ಬಿದ್ದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿ ಶಂಕರ್‌ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎನ್ನುವ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.

ಅಪರಾಧಿ ಶಂಕರ್ ಪತ್ನಿ ಮೇಲಿನ ಮೋಹದಿಂದ ಅಕ್ರಮವಾಗಿ ಕೈದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಡಿಐಜಿ ಸೋಮಶೇಖರ್ ಹಾಗೂ ಸಿಬ್ಬಂದಿ ಶ್ರೀಕಾಂತ್, ಅಪರಾಧಿ ಶಂಕರ್ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದು, ಆಕೆಯನ್ನು ಬಳಸಿಕೊಂಡಿದ್ದರು. ಇದರ ಋಣ ತೀರಿಸಲು 2018ರಲ್ಲಿ ಸುಪ್ರೀಂಕೋರ್ಟ್​​​ನ ನಕಲಿ ಆದೇಶ ಸೃಷ್ಟಿಸಿ ಶಂಕರ್ ಬಿಡುಗಡೆಗೆ ಸಂಚು ರೂಪಿಸಲಾಗಿತ್ತು. ಈ ಅಕ್ರಮದಲ್ಲಿ ಡಿಐಜಿ ಸೋಮಶೇಖರ್ ಪಾತ್ರದ ಬಗ್ಗೆ ಕೈದಿ ಪತ್ನಿ ಒಪ್ಪಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

‎ಸುಪ್ರೀಂಕೋರ್ಟ್ ಆದೇಶವನ್ನು ನಕಲಿಯಾಗಿ ಸೃಷ್ಟಿಸಿ 2018 ನ.13ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಅಪರಾಧಿ ಶಂಕರ್, ನಕಲಿ ಆದೇಶ ಸೃಷ್ಟಿಸಲು ಸಹಕರಿಸಿದ್ದ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ವಿಭಾಗದ ಹಾಲಿ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ್‌ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಅಂದಿನ ಜೈಲು ಮುಖ್ಯ ಅಧೀಕ್ಷಕರಾಗಿದ್ದ ಸೋಮಶೇಖರ್ ಅವರ ಕೈವಾಡ ಬಗ್ಗೆ ತಿಳಿದುಬಂದಿತ್ತು. ಇದಕ್ಕೆ ಪೂರಕವಾಗಿ ಕೈದಿ ಶಂಕರ್ ಪತ್ನಿ ವಿಚಾರಣೆಯಲ್ಲಿ ಅಧೀಕ್ಷಕರ ಪಾತ್ರವಿರುವುದಾಗಿ ಹೇಳಿಕೆ ನೀಡಿದ್ದರು. ಈ ಮಾಹಿತಿ ಆಧರಿಸಿ ಅ.4ರಂದು ಡಿಐಜಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತನಿಖೆಗೆ ಸಹಕರಿಸಿದ ಕುರಿತು ಮಾಹಿತಿ ಮರೆಮಾಚಿದ್ದಾರೆ. ಈ ಸಂಬಂಧ ಬಂಧಿಸಲಾಗಿದೆ. ಪ್ರಕರಣದಲ್ಲಿ ಡಿಐಜಿ ಮೂರನೇ ಆರೋಪಿಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‎2001ರಲ್ಲಿ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಂಕರ್‌ಗೆ 2004ರಲ್ಲಿ ತ್ವರಿತಗತಿ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಶಂಕರ್ ಮೊರೆ ಹೋಗಿದ್ದ. ಈತನ ಅರ್ಜಿ ತಿರಸ್ಕೃತವಾಗಿದ್ದವು. ಶಿಕ್ಷೆಯಿಂದ ಪಾರಾಗಲು ಸಂಚು ರೂಪಿಸಿದ ಶಂಕರ್, ಸುಪ್ರೀಂ ಕೋರ್ಟ್ ಆದೇಶವನ್ನ ನಕಲಿಯಾಗಿ ಸೃಷ್ಟಿಸಿಕೊಂಡು 2018ರ ನವೆಂಬರ್‌ನಲ್ಲಿ ಜೈಲು ಅಧಿಕಾರಿಗಳಿಗೆ ತೋರಿಸಿ 10 ಸಾವಿರ ರೂ. ದಂಡ ತೆತ್ತು ಬಿಡುಗಡೆಯಾಗಿದ್ದ. ‎ಇದಾದ 8 ವರ್ಷಗಳ ಬಳಿಕ ಕಾರಾಗೃಹ ಇಲಾಖೆಗೆ ನಕಲಿ ಆದೇಶ ಸೃಷ್ಟಿಸಿದ ಬಗ್ಗೆ ಅನಾಮಧೇಯ ಪತ್ರ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆದು ಆದೇಶವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‌ಗೆ ಕಳುಹಿಸಿದಾಗ ಇದೊಂದು ನಕಲಿ ಆದೇಶವೆಂದು ಗೊತ್ತಾಗಿತ್ತು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕಾರಾಗೃಹದ ಅಧೀಕ್ಷಕರು ಕರ್ಣ ಬಿ.ಕ್ಷೇತ್ರಿ ಎಂಬುವರು ಶಂಕರ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇಲೆಕ್ಟ್ರಾನಿಕ್ ವಿಭಾಗ ಡಿಸಿಪಿ ನಾತಾಯಣ್ ನೇತೃತ್ವದ ತಂಡ,‎ ಕಳೆದ ಜೂನ್‌ನಲ್ಲಿ ಮೈಸೂರಿನಲ್ಲಿ ಅಪರಾಧಿಯನ್ನ ಬಂಧಿಸಿತ್ತು.

ಈತ ನೀಡಿದ ಮಾಹಿತಿ ಆಧರಿಸಿ ಎಫ್‌ಡಿಎ ಆಗಿರುವ ಶ್ರೀಕಾಂತ್‌ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಸೋಮಶೇಖರ್ ಪಾತ್ರದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು. ಈ ಬಗ್ಗೆ ಶಂಕರ್ ಪತ್ನಿ ಸಹ ಗಂಡನ ಬಿಡುಗಡೆ ಹಿಂದೆ ಡಿಐಜಿ ಶಾಮೀಲು ಆಗಿರುವ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಕುರಿತು ಸತ್ಯ ಸಂಗತಿ ಮುಚ್ಚಿಟ್ಟು ತನಿಖೆಗೆ ಸಹಕರಿಸದ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‎ಬಂಧಿತ ಇಬ್ಬರು ಆರೋಪಿ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

ಸದ್ಯ ಪರಪ್ಪನ ಅಗ್ರಹಾರ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತನಿಖೆಗೆ ಸಹಕರಿಸದೆ ಮಾಹಿತಿ ಮಾರೆಮಾಚಿದ ಆರೋಪದಡಿ ಸೋಮಶೇಖರ್ ಬಂಧಿಸಲಾಗಿದ್ದು, ಸೋಮವಾರ 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಅ.9ರವರೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.













































error: Content is protected !!
Scroll to Top