ನೆರೆ ಪರಿಹಾರ ಘೋಷಣೆ -50 ಕೋ.ರೂ. ಬಿಡುಗಡೆ

ಬೆಂಗಳೂರು, ಆ.  6: ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ  ಧಾರಾಕಾರ  ಮಳೆ ಸುರಿದ ಪರಿಣಾಉವಾಗಿ ಅಪಾರ ನಾಶನಷ್ಟ ಸಂಭವಿಸಿದೆ.ಕರಾವಳಿ ಮತ್ತು ಕೊಡಗಿನಲ್ಲಿ ಮಳೆ ಅಬ್ಬರ ತೀವ್ರವಾಗಿದೆ.   ಮಳೆಯಿಂದ ಸಂತ್ರಸ್ತರಾದವರಿಗೆ ರಾಜ್ಯ ಸರಕಾರ ಮೊದಲ ಹಂತದ  ಪರಿಹಾರ ಘೋಷಣೆ ಮಾಡಿದೆ.

ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ತಲಾ ಹತ್ತು ಸಾವಿರ ಮತ್ತು ಮಳೆಯಿಂದ ಸಂಪೂರ್ಣವಾಗಿ ಮನೆಯು ಹಾನಿಗೀಡಾದರೆ ಐದು ಲಕ್ಷ ಪರಿಹಾರ ಮೊತ್ತವನ್ನು ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು‌ ವಹಿಸುವಂತೆ ಮುಖ್ಯಮಂತ್ರಿಯವರು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಹೇಳಿದ್ದಾರೆ. ಕ್ಷೇತ್ರ ಬಿಟ್ಟು ಹೋಗದೆ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಸಚಿವರಿಗೆ ತಿಳಿಸಿದ್ದಾರೆ. ಸ್ಥಳದಲ್ಲಿಯೇ ಪರಿಹಾರ ವಿತರಣೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು, ಈಗಾಗಲೇ 50 ಕೋಟಿ ಹಣ ಬಿಡುಗಡೆ ಮಾಡಿದ್ದು ಅಗತ್ಯವಿದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿಗಳು ಅತಿ ತುರ್ತು ಕೆಲಸಗಳಿಗೆ ಉಸ್ತುವಾರಿ ಸಚಿವರುಗಳೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಸರ್ವೆ‌ ಮಾಡಿ ವರದಿ ಕೊಡಬೇಕು, ಪ್ರತಿದಿನ‌ ಒಟ್ಟು ಹಾನಿಯ ಬಗ್ಗೆಯೂ ವರದಿ ಕೊಡಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಭಾಗಶಃ ಹಾನಿಯಾಗಿದ್ದರೆ ಹಾನಿಗೆ ಅನುಗುಣವಾಗಿ ಪರಿಹಾರ ವಿತರಿಸಬೇಕು‌ ಹಾಗೂ ಈಗಾಗಲೇ ಜಿಲ್ಲಾ ಕೇಂದ್ರಗಳ ಹಾಸ್ಟೆಲ್, ಶಾಲಾ-ಕಾಲೇಜುಗಳು ಕೋವಿಡ್ ಕೇಂದ್ರಗಳಾಗಿರುವುದರಿಂದ ಹಳ್ಳಿಗಳಲ್ಲಿರುವ ಶಾಲಾ-ಕಾಲೇಜುಗಳನ್ನು ನಿರಾಶ್ರಿತರ ಕೇಂದ್ರಗಳನ್ನಾಗಿಸಿ, ಅಲ್ಲಿ‌ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ‌ ನೀಡಿದ್ದಾರೆ.

 error: Content is protected !!
Scroll to Top