ಅ. 10-17 : ಕಾರ್ಕಳದ 50 ಕಡೆಗಳಲ್ಲಿ ಯೋಗ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಸಹಯೋಗ

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಜನಜಾಗೃತಿ ವೇದಿಕೆ, ಶೌರ್ಯ ನಿರ್ವಹಣಾ ಘಟಕ, ಪ್ರಗತಿ ಬಂಧು – ಸ್ವಸಹಾಯ ಒಕ್ಕೂಟ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅ. 11 ಭಾನುವಾರದಿಂದ ಅ. 17ರ ಶನಿವಾರದವರೆಗೆ ಉಚಿತ ಯೋಗ ಶಿಬಿರ ನಡೆಯಲಿದೆ.
ಸಾರ್ವಜನಿಕರಿಗೆ ಅನುಭವಿ ಯೋಗ ಶಿಕ್ಷಕರಿಂದ ಬೃಹತ್ ಉಚಿತ ದಸರಾ ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ವಿದ್ಯಾರ್ಥಿಗಳಿಗಾಗಿ ಪಂಚಮುಖಿ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಲಿದ್ದು ಈ ಕುರಿತು ಸೆ. 26ರಂದು ಎಸ್‌ಕೆಡಿಆರ್‌ಡಿಪಿ ಯೋಜನಾ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಶಿಬಿರದ ರೂಪುರೇಷೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಚರ್ಚಿಸಿ ಕಾರ್ಕಳ ತಾಲೂಕಿನ 50 ವಿವಿಧ ಕೇಂದ್ರಗಳಲ್ಲಿ ಯೋಗ ತರಬೇತಿ ನೀಡಲು ನಿರ್ಧರಿಸಲಾಯಿತು. ಅಲ್ಲದೆ ಕಾರ್ಕಳ ತಾಲೂಕಿನ ಒಂದು ವಲಯದಲ್ಲಿ 100 ವಿದ್ಯಾರ್ಥಿಗಳಿಗೆ 5 ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ನಡೆಸುವ ಬಗ್ಗೆಯೂ ಚರ್ಚಿಸಲಾಯಿತು.
ಸಾಮಾಜಿಕ ಮುಂದಾಳು ಪದ್ಮಪ್ರಸಾದ್‌ ಜೈನ್‌, ಜನಜಾಗೃತಿ ವೇದಿಕೆ ಸದಸ್ಯರಾದ ತಾರಾನಾಥ ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಹರೀಶ್ ಕಡ್ತಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಶೌರ್ಯ ಘಟಕದ ಪ್ರತಿನಿಧಿಗಳು, ಒಕ್ಕೂಟಗಳ ಅಧ್ಯಕ್ಷರು, ಜನಜಾಗೃತಿ ಸದಸ್ಯರು, ಭಜನಾ ಮಂಡಳಿಗಳ ಸದಸ್ಯರು, ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಿಯ್ಯಾರು ವಲಯದ ಮೇಲ್ವಿಚಾರಕ ದಿನೇಶ್ ಹೆಗ್ಡೆ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

















































































error: Content is protected !!
Scroll to Top