ಭಾರತವನ್ನು ದೇವರೇ ಕಾಪಾಡಬೇಕು ಅಂದಿದ್ದೇಕೆ?
ಬೆಂಗಳೂರು: ರೈಲಿನಲ್ಲಿ ತಮಗಾದ ಕೆಟ್ಟ ಅನುಭವವೊಂದನ್ನು ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಹಂಚಿಕೊಂಡಿದ್ದಾರೆ.
ಎಂಜಾಯ್ ಮಾಡಬೇಕು ಸರಿ. ಆದರೆ ಇನ್ನೊಬ್ಬರಿಗೆ ಕಿರಿಕಿರಿಯಾದರೂ ಪರವಾಗಿಲ್ಲ. ಆದರೆ ತಾವು ಮಾತ್ರ ಎಂಜಾಯ್ ಮಾಡಬೇಕು ಎನ್ನುವ ಮನೋಭಾವ ಬದಲಾಗುವುದು ಯಾವಾಗ? ನಮ್ಮ ದೇಶದಲ್ಲಿ ಸಿವಿಕ್ ಸೆನ್ಸ್ ಯಾವಾಗ ಬರುತ್ತದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ನಮ್ಮ ಜನರು ಸಾರ್ವಜನಿಕ ಸ್ಥಳಗಳಲ್ಲಿಯೂ ಪ್ರೈವೇಟ್ ಪ್ಲೇಸ್ ಎಂಬಂತೆಯೇ ವರ್ತಿಸುತ್ತಾರೆ. ಇದು ತಪ್ಪು ಎನ್ನುವ ಸಾಮಾನ್ಯ ಜ್ಞಾನ ಸಹ ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಬೊಬ್ಬೆ ಹೊಡೆಯುವುದು, ಕಿರುಚುವುದು ತಪ್ಪು ಎನ್ನುವ ಜ್ಞಾನ ಚಿಕ್ಕ ಮಕ್ಕಳಿಗೂ ಇದೆ. ನಾವು ಕಲಾವಿದರು. ನಮಗೆ ನಿಶ್ಶಬ್ಧದಲ್ಲೇ ಮನಸ್ಸು ಶಾಂತವಾಗಿರುವುದು ಎಂದು ಅವರು ಹೇಳಿದ್ದಾರೆ.
ರೈಲು ಪ್ರಯಾಣದ ಆರಂಭದಲ್ಲಿ ಎಕ್ಸೆಟ್‌ಮೆಂಟ್ ಇರುತ್ತದೆ. ಎಲ್ಲರೂ ವರ್ಷಗಳ ನಂತರ ಭೇಟಿಯಾಗಿರಬಹುದು. ಅಥವಾ ಟ್ರಿಪ್‌ನ ಎಕ್ಸೆಟ್‌ಮೆಂಟ್ ಇರಬಹುದು. ಆದರೆ ಗಂಟೆಗಳು ಕಳೆದರೂ ಅದು ನಿಲ್ಲದೇ ಹೋದರೆ ಇತರರಿಗೆ ಕಿರಿಕಿರಿ ಆಗುವುದಿಲ್ಲವೇ? ರೈಲಿನಲ್ಲಿ 40 ಮಧ್ಯವಯಸ್ಕ ಪುರುಷರು ಖುಷಿಯಲ್ಲಿ ಆಗಮಿಸಿದರು. 56 ಸೀಟರ್‌ಗಳಿದ್ದ ಕೋಚ್‌ನಲ್ಲಿ 40 ಜನರ ಗ್ಯಾಂಗ್ ತುಂಬಿತ್ತು. ಒಂದು ನಿಮಿಷ ಗ್ಯಾಪ್ ಇಲ್ಲದಂತೆ ಸತತವಾಗಿ ಇವರೆಲ್ಲರೂ ಐದು ಗಂಟೆಗಳ ಕಾಲ ಮಾತನಾಡಿದ್ದಾರೆ. ಭಾರತದ ಸಮಸ್ಯೆ ಏನು ಅಂದರೆ ಇದನ್ನು ಕೇಳೋರು ಯಾರೂ ಇಲ್ಲ! ಹೌದು, ಇದು ಬಾಯಿಬಿಟ್ಟು ಹೇಳದೇ ಇರುವ ರೂಲ್ಸ್ ಅವರು ಗಲಾಟೆ ಮಾಡಬೇಕು, ಉಳಿದವರು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳಬೇಕು. ನನಗೆ ತಡೆದುಕೊಳ್ಳಲು ಆಗಲಿಲ್ಲ. ಟಿಟಿಇ ಅವರನ್ನು ಕರೆದು ನನಗೆ ಇಲ್ಲಿ ಕೂರಲು ಆಗುತ್ತಿಲ್ಲ ಬೇರೆ ಕೋಚ್‌ನಲ್ಲಿ ಜಾಗ ಕೊಡುತ್ತೀರಾ ಎಂದು ಕೇಳಿದೆ. ರೈಲು ಬುಕ್ ಆಗಿದ್ದ ಕಾರಣ ಯಾವ ಸೀಟ್ ಕೂಡ ಖಾಲಿ ಇರಲಿಲ್ಲ.
ನನ್ನ ಕಿವಿಯನ್ನು ನಾನೇ ಮುಚ್ಚಿಕೊಂಡು ಸಮಾಧಾನಿಸಿಕೊಳ್ಳಲು ಪ್ರಯತ್ನಿಸಿದೆ. ಆ ಮಧ್ಯದಲ್ಲಿ ಎಂಟು ಮಂದಿ ಪುರುಷರು ಉನೋ ಆಡೋದಕ್ಕೆ ಆರಂಭಿಸಿದರು. ನಗು, ಕೇಕೆ, ಮಾತು ಎಲ್ಲವೂ ಇರಿಟೇಟ್ ಆಗುವಂತಿತ್ತು. ಆಗ ಸಿಟ್ಟು ನೆತ್ತಿಗೇರಿತು. ಮತ್ತೆ ಟಿಟಿಇ ಅವರನ್ನು ಕರೆದು ಸದ್ದು ಮಾಡದಂತೆ ಮನವಿ ಮಾಡಿದೆ. ಟಿಟಿಇ ಅವರ ಬಳಿ ಹೋಗಿ ಗಲಾಟೆ ಮಾಡಬೇಡಿ ಎಂದರು ತಕ್ಷಣ ಗಲಾಟೆ ನಿಂತುಹೋಯ್ತು. ಆಮೇಲೆ ಟಿಟಿಇ ಅವರು ನನ್ನನ್ನು ತಮಾಷೆ ಮಾಡುವಂತೆ ಆ ಗುಂಪನ್ನು ಉದ್ದೇಶಿಸಿ ‘ ಯಾಕೆ ಸರ್ ಗಲಾಟೆ ಮಾಡ್ತಿದ್ದೀರಿ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಆಗ ಇಡೀ ಗುಂಪಿನ ಜನ ಗಹಗಹಿಸಿ ನಕ್ಕರು. ನಂತರ ‘ ನೀವು ಬನ್ನಿ ಸರ್ ಆಟಾಡೋಣ’ ಎಂದು ಟಿಟಿಇ ಅವರನ್ನೇ ಕರೆದರು.
ಇಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವ ಪ್ರಶ್ನೆ ಹುಟ್ಟೋದೇ ಇಲ್ಲ. ನನ್ನನ್ನು ಸೇರಿ ಭಾರತೀಯರು ಸಿವಿಕ್ ಸೆನ್ಸ್ ಮರೆತುಬಿಟ್ಟರಾ? ಈ ರೀತಿ ಜನರಿರುವವರೆಗೂ ನಮ್ಮ ದೇಶ ಉದ್ದಾರ ಆಗೋಕೆ ಸಾಧ್ಯವಾ? ಇದರ ಜೊತೆಗೆ ಜೋರಾದ ಸೌಂಡ್‌ನಲ್ಲಿ ಬಾಲಿವುಡ್ ಹಾಡುಗಳನ್ನು ಹಾಕಿ ಗಲಾಟೆ ಮಾಡಿದರು. ಈ ದೇಶವನ್ನು ದೇವರೇ ಕಾಪಾಡಬೇಕು ಎಂದು ಬರೆದುಕೊಂಡಿದ್ದಾರೆ.





















