ಗೃಹಲಕ್ಷ್ಮೀ ಯೋಜನೆಗೆ ಮಹಿಳೆಯ ಪತಿಯ ಆಧಾರ್ ಜೋಡಣೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹಾಗೆ ನೂತನ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಸರಿಯಾಗಿ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಗೃಹಲಕ್ಷ್ಮೀ ಹಣ ಪಡೆಯುವ ಮಹಿಳೆಯ ಆಧಾರ್ ಜೊತೆಗೆ ಆಕೆಯ ಪತಿಯ ಆಧಾರ್ ಕಾರ್ಡ್ ಅನ್ನು ಸಹ ಈ ಯೋಜನೆಗೆ ಜೋಡಣೆ ಮಾಡುವುದು ಕಡ್ಡಾಯ ಎಂದು ಹೇಳಲಾಗಿದೆ. ಜೊತೆಗೆ ಈ ಹಣ ಸಾಲಕ್ಕೆ ಸಂದಾಯ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಸಾಲ ಇಲ್ಲದೇ ಇರುವ ಬ್ಯಾಂಕ್ ಖಾತೆಗಳನ್ನು ಅಳವಡೆಸುವಂತೆ ಸೂಚಿಸಲಾಗಿದೆ.

ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಫಲಾನುಭವಿಗಳ ಹೆಸರು ಮತ್ತು ವಿಳಾಸ ಇರಬೇಕು. ಅರ್ಹ ಫಲಾನುಭವಿಗಳನ್ನು ದೃಢಪಡಿಸಿಕೊಳ್ಳುವ ಭಾಗವಾಗಿ ಹತ್ತು ಹಲವು ಅಂಶಗಳನ್ನು ಒಳಗೊಂಡ ಅರ್ಜಿಯನ್ನು ಸರ್ಕಾರ ರೂಪಿಸಿದೆ. ಜತೆಗೆ ಆಧಾರ್, ಬ್ಯಾಂಕ್ ಖಾತೆ, ಪಡಿತರ ಚೀಟಿ ಪರಿಶೀಲನೆ, ಮುಖಚರ್ಯೆ ದೃಢೀಕರಣವನ್ನೂ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಗಣತಿದಾರರನ್ನು ನಿಯೋಜಿಸಲಾಗಿದ್ದು, ಅವರು ಮನೆ ಮನೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ, ದಾಖಲೆಗಳ ಪರಿಶೀಲನೆ, ಬಯೋಮೆಟ್ರಿಕ್ ಅಥವಾ ಮುಖಚರ್ಯೆ ದೃಢೀಕರಣ ಹಾಗೂ ಬ್ಯಾಂಕ್ ಖಾತೆ ವಿವರಗಳ ಪರಿಶೀಲನೆ, ಸ್ಥಳ ಮಹಜರ್ ಮಾಡಿದ ಛಾಯಾಚಿತ್ರಕ್ಕೆ ಆದ್ಯತೆ ನೀಡಲಾಗಿದೆ.

ಗೃಹಲಕ್ಷ್ಮೀ ಹಣವನ್ನು ಪಡೆಯಲು ಬಯಸದವರು ಸ್ವಯಂಪ್ರೇರಣೆಯಿಂದ ಆ ಯೋಜನೆಯಿಂದ ಹೊರಬರುವುದಕ್ಕೂ ಸರ್ಕಾರ ಅವಕಾಶ ನೀಡಿದೆ.











































error: Content is protected !!
Scroll to Top