PCOS ಪಾಲಿಸ್ಟಿಕ್ ಓವರಿ ಸಿಂಡ್ರೋಮ್

ಇಂದಿನ ದಿನಗಳಲ್ಲಿ ಅನೇಕ ಯುವತಿಯರನ್ನು ಕಾಡುತ್ತಿರುವ ಒಂದು ಪ್ರಮುಖ ಆರೋಗ್ಯ ಸಮಸ್ಯೆ ಎಂದರೆ PCOS. PCOS ಅಂದರೆ Polycystic Ovarian Syndrome. ಇದನ್ನು ಕನ್ನಡದಲ್ಲಿ “ಅಂಡಾಶಯದಲ್ಲಿ ಅನೇಕ ಸಣ್ಣ ಚೀಲಗಳು ಉಂಟಾಗುವ ಸಮಸ್ಯೆ” ಎಂದು ಕರೆಯಬಹುದು. ಪ್ರತಿ 5 ಮಹಿಳೆಯರಲ್ಲಿ 1 ಮಹಿಳೆಗೆ ಈ ಸಮಸ್ಯೆ ಇರುತ್ತದೆ. ಆಯುರ್ವೇದದಲ್ಲಿ ಇದನ್ನು “ಆರ್ತವದೋಷ” ಅಥವಾ “ನಸ್ಟಾರ್ತವ” ಎಂದು ವಿವರಿಸಲಾಗಿದೆ.

PCOS ಎಂದರೇನು?

ಮಹಿಳೆಯ ಅಂಡಾಶಯದಲ್ಲಿ ಪ್ರತಿ ತಿಂಗಳು ಅಂಡಗಳು ರೂಪುಗೊಂಡು ಅವು ಬೆಳೆದು ಬಿಡುಗಡೆಯಾಗಬೇಕು. ಆದರೆ PCOS ಇರುವವರಲ್ಲಿ ಅಂಡಗಳು ಸರಿಯಾಗಿ ಬೆಳೆಯುವುದಿಲ್ಲ. ಬದಲಾಗಿ ಅಂಡಾಶಯದ ಸುತ್ತಲೂ ಮುತ್ತಿನಂತೆ ಅನೇಕ ಸಣ್ಣ ಸಣ್ಣ ಚೀಲಗಳು ಉಂಟಾಗುತ್ತವೆ. ಇದರಿಂದ ಹಾರ್ಮೋನುಗಳ ಅಸಮತೋಲನ, ಮುಟ್ಟು ತಪ್ಪುವುದು, ತೂಕ ಹೆಚ್ಚಾಗುವುದು, ಮುಖದಲ್ಲಿ ಕೂದಲು ಬರುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಆಯುರ್ವೇದ ಪ್ರಕಾರ PCOS ಗೆ ಕಾರಣಗಳು

ಆಯುರ್ವೇದದಲ್ಲಿ ಯಾವುದೇ ರೋಗಕ್ಕೂ ಒಂದೇ ಕಾರಣ ಇರುವುದಿಲ್ಲ. ಮೂರು ದೋಷಗಳಾದ ವಾತ, ಪಿತ್ತ, ಕಫ ಮತ್ತು ಜೀವನಶೈಲಿಯೇ ಮುಖ್ಯ ಕಾರಣ.

  1. ಆಹಾರ- ಹೆಚ್ಚು ಜಂಕ್ ಫುಡ್, ಸಿಹಿ, ಹಾಲು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳು, ಫಾಸ್ಟ್ ಫುಡ್, ತಣ್ಣಗಿನ ಪಾನೀಯಗಳು. ಇದು ಕಫ ದೋಷವನ್ನು ಹೆಚ್ಚಿಸುತ್ತದೆ.
  2. ಜೀವನಶೈಲಿ- ವ್ಯಾಯಾಮದ ಕೊರತೆ, ರಾತ್ರಿ ತಡವಾಗಿ ಮಲಗುವುದು, ಮಾನಸಿಕ ಒತ್ತಡ, ಕುಳಿತುಕೊಳ್ಳುವ ಕೆಲಸ. ಇದರಿಂದ ಕಫ ಮತ್ತು ವಾತ ಎರಡೂ ಹೆಚ್ಚಾಗುತ್ತದೆ.
  3. ಅಗ್ನಿ ಮಂದ -ಜೀರ್ಣಶಕ್ತಿ ಕಡಿಮೆಯಾದಾಗ ಆಮ ಎಂಬ ವಿಷಕಾರಿ ವಸ್ತು ದೇಹದಲ್ಲಿ ಸಂಗ್ರಹವಾಗುತ್ತದೆ. ಇದು ರಕ್ತ ಮತ್ತು ರಸಧಾತುವನ್ನು ಕಲುಷಿತಗೊಳಿಸುತ್ತದೆ.
  4. ಮನಸ್ಸಿನ ಒತ್ತಡ -ಆಯುರ್ವೇದದಲ್ಲಿ ಮನಸ್ಸು ಮತ್ತು ದೇಹವನ್ನು ಬೇರೆ ಮಾಡುವುದಿಲ್ಲ. ಆತಂಕ, ಖಿನ್ನತೆ, ಒತ್ತಡವು ನೇರವಾಗಿ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ.

ಆಯುರ್ವೇದ ಪ್ರಕಾರ PCOS ನಲ್ಲಿ ಮುಖ್ಯವಾಗಿ ಕಫ ದೋಷ ಮತ್ತು ಮೇದೋಧಾತು ಹೆಚ್ಚಾಗುತ್ತದೆ. ಜೊತೆಗೆ ಅಪಾನ ವಾಯು ಅಂದರೆ ಸೊಂಟದ ಕೆಳಗಿನ ಭಾಗದ ವಾಯು ಅಸಮತೋಲನಗೊಳ್ಳುತ್ತದೆ. ಇದರಿಂದ ಆರ್ತವ ಚಕ್ರದಲ್ಲಿ ತೊಂದರೆಯಾಗುತ್ತದೆ.

PCOS ನ ಲಕ್ಷಣಗಳು-

  1. ಅನಿಯಮಿತ ಮುಟ್ಟು – 35 ದಿನಕ್ಕಿಂತ ಹೆಚ್ಚು ಅಂತರದಲ್ಲಿ ಮುಟ್ಟಾಗುವುದು ಅಥವಾ 3-4 ತಿಂಗಳಿಗೆ ಒಮ್ಮೆ ಆಗುವುದು
  2. ಅಂಡೋತ್ಪತ್ತಿ ಆಗದಿರುವುದು- ಇದರಿಂದ ಗರ್ಭಧಾರಣೆ ತಡವಾಗಬಹುದು
  3. ತೂಕ ಹೆಚ್ಚಾಗುವುದು- ವಿಶೇಷವಾಗಿ ಹೊಟ್ಟೆಯ ಸುತ್ತ
  4. ಮುಖ ಮತ್ತು ದೇಹದಲ್ಲಿ ಅನಗತ್ಯ ಕೂದಲು ಗಡ್ಡ, ಮೀಸೆ ಬೆಳೆಯುವುದು.
  5. ಮೊಡವೆ ಮತ್ತು ಎಣ್ಣೆಯುಕ್ತ ಚರ್ಮ.
  6. ತಲೆಯ ಕೂದಲು ಉದುರುವುದು.
  7. ಮಾನಸಿಕ ಒತ್ತಡ, ಆತಂಕ, ನಿದ್ರಾಹೀನತೆ.

ಆಯುರ್ವೇದ ಚಿಕಿತ್ಸೆ

ಆಯುರ್ವೇದದಲ್ಲಿ PCOS ಗೆ ಮೂಲದಿಂದ ಚಿಕಿತ್ಸೆ ನೀಡಲಾಗುತ್ತದೆ. ಕೇವಲ ಲಕ್ಷಣಗಳನ್ನು ನಿವಾರಿಸುವುದಲ್ಲ.

  1. ಅಗ್ನಿ ದೀಪನ- ಜೀರ್ಣಶಕ್ತಿಯನ್ನು ಹೆಚ್ಚಿಸುವುದು. ಏಕೆಂದರೆ ಜೀರ್ಣ ಚೆನ್ನಾಗಿದ್ದರೆ ಆಮ ಉತ್ಪತ್ತಿಯಾಗುವುದಿಲ್ಲ.
  2. ಆಮ ಪಾಚನ- ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕುವುದು
  3. ದೋಷ ಸಮತೋಲನ- ಹೆಚ್ಚಾಗಿರುವ ಕಫ ಮತ್ತು ವಾತವನ್ನು ಸಮತೋಲನ ಮಾಡುವುದು
  4. ಮುಟ್ಟನ್ನು ನಿಯಮಿತಗೊಳಿಸುವುದು.
  5. ಮೇದೋಹರ- ತೂಕವನ್ನು ನಿಯಂತ್ರಿಸುವುದು.

ಆಯುರ್ವೇದ ಔಷಧಿಗಳು ಮತ್ತು ಗಿಡಮೂಲಿಕೆಗಳು-

ಯಾವುದೇ ಔಷಧಿಯನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬೇಡಿ.

  1. ಶತಾವರಿ – ಮಹಿಳೆಯರಿಗೆ ವರದಾಯಿನಿ. ಹಾರ್ಮೋನುಗಳನ್ನು ಸಮತೋಲನ ಮಾಡುತ್ತದೆ. ಆರ್ತವವನ್ನು ನಿಯಮಿತಗೊಳಿಸುತ್ತದೆ.
  2. ಅಶೋಕ – ಗರ್ಭಾಶಯ ಮತ್ತು ಅಂಡಾಶಯದ ಆರೋಗ್ಯಕ್ಕೆ ಅತ್ಯುತ್ತಮ. ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.
  3. ಲೋಧ್ರ – PCOS ನಲ್ಲಿ ರಕ್ತಸ್ರಾವ ಹೆಚ್ಚಾದಾಗ ಉಪಯೋಗಿಸುತ್ತಾರೆ.
  4. ಗುಗ್ಗುಲು- ತ್ರಿಕಟು ಗುಗ್ಗುಲು, ಕಾಂಚನಾರ ಗುಗ್ಗುಲು. ಇದು ಕಫ ಮತ್ತು ಮೇದವನ್ನು ಕಡಿಮೆ ಮಾಡುತ್ತದೆ. ಅಂಡಾಶಯದ ಚೀಲಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
  5. ಪುನರ್ನವ – ದೇಹದಲ್ಲಿನ ಹೆಚ್ಚುವರಿ ನೀರನ್ನು ಹೊರಹಾಕುತ್ತದೆ. ಊತ ಕಡಿಮೆ ಮಾಡುತ್ತದೆ.
  6. ದಾರುಹರಿದ್ರಾ, ಮಂಜಿಷ್ಠ – ರಕ್ತವನ್ನು ಶುದ್ಧೀಕರಿಸುತ್ತದೆ.
  7. ಜೀರಿಗೆ, ಶುಂಠಿ, ಅರಿಶಿನ ಜೀರ್ಣಶಕ್ತಿ ಹೆಚ್ಚಿಸಿ ಆಮವನ್ನು ಕಡಿಮೆ ಮಾಡುತ್ತದೆ.

ಪಂಚಕರ್ಮ ಚಿಕಿತ್ಸೆ-

ಗಂಭೀರ PCOS ಗೆ ಪಂಚಕರ್ಮ ತುಂಬಾ ಉಪಯುಕ್ತ.

  1. ವಮನ – ಕಫ ದೋಷವನ್ನು ಹೊರಹಾಕಲು
  2. ವಿರೇಚನ – ಪಿತ್ತ ಮತ್ತು ಆಮವನ್ನು ಹೊರಹಾಕಲು
  3. ಬಸ್ತಿ – ವಿಶೇಷವಾಗಿ ಅನುವಾಸನ ಬಸ್ತಿ ಮತ್ತು ನಿರೂಹ ಬಸ್ತಿ. ಇದು ಅಪಾನ ವಾಯುವನ್ನು ಸರಿಪಡಿಸಿ ಮುಟ್ಟನ್ನು ನಿಯಮಿತಗೊಳಿಸುತ್ತದೆ.
  4. ಉತ್ತರ ಬಸ್ತಿ – ಗರ್ಭಾಶಯ ಮತ್ತು ಅಂಡಾಶಯದ ಆರೋಗ್ಯಕ್ಕೆ ನೇರವಾಗಿ ಔಷಧಿ ನೀಡುವ ವಿಧಾನ.

ಆಹಾರ ಪಥ್ಯ-

ಆಯುರ್ವೇದದಲ್ಲಿ ಆಹಾರವೇ ಔಷಧಿ.

ಬಾರ್ಲಿ, ಹಳೆಯ ಅಕ್ಕಿ, ಹೆಸರುಕಾಳು, ಬೆಂಡೆಕಾಯಿ, ಬೇವು, ಮೆಂತ್ಯ, ದಾಲ್ಚಿನ್ನಿ, ಬೆಚ್ಚಗಿನ ನೀರು, ತುಪ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ.ಮೈದಾ, ಸಕ್ಕರೆ, ಪ್ಯಾಕೆಟ್ ಜ್ಯೂಸ್, ಐಸ್ ಕ್ರೀಂ, ಚೀಸ್, ಮೊಸರು ರಾತ್ರಿ, ತಣ್ಣಗಿನ ಆಹಾರ, ಜಂಕ್ ಫುಡ್ ನಿಂದ ದೂರವಿರಿ.

ಜೀವನಶೈಲಿ ಮತ್ತು ಯೋಗ-

  1. ದಿನಚರ್ಯೆ- ಬೆಳಗ್ಗೆ 6 ರೊಳಗೆ ಎದ್ದು, ರಾತ್ರಿ 10 ಕ್ಕೆ ಮಲಗುವುದು.
  2. ವ್ಯಾಯಾಮ- ದಿನಕ್ಕೆ 45 ನಿಮಿಷ ವೇಗವಾಗಿ ನಡಿಗೆ. ಸೂರ್ಯ ನಮಸ್ಕಾರ, ಭುಜಂಗಾಸನ, ಧನುಷಾಸನ, ಮತ್ಸ್ಯಾಸನ – ಇವು ಅಂಡಾಶಯಕ್ಕೆ ಒಳ್ಳೆಯದು.
  3. ಪ್ರಾಣಾಯಾಮ- ಅನುಲೋಮ ವಿಲೋಮ, ಭ್ರಮರಿ. ಇದು ಒತ್ತಡ ಕಡಿಮೆ ಮಾಡುತ್ತದೆ.
  4. ಧ್ಯಾನ- ಮನಸ್ಸನ್ನು ಶಾಂತವಾಗಿಡಲು ದಿನಕ್ಕೆ 10 ನಿಮಿಷ ಧ್ಯಾನ.

ಮನೆಮದ್ದು-

  1. ರಾತ್ರಿ 1 ಚಮಚ ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಕುಡಿಯುವುದು.
  2. ದಾಲ್ಚಿನ್ನಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದು.
  3. ಶುಂಠಿ ಮತ್ತು ಅರಿಶಿನ ಹಾಕಿದ ಬೆಚ್ಚಗಿನ ನೀರು.

PCOS ಗುಣಪಡಿಸಲಾಗದ ರೋಗವಲ್ಲ. ಆಯುರ್ವೇದದಲ್ಲಿ ಕ್ರಮಬದ್ಧ ಚಿಕಿತ್ಸೆ, ಸರಿಯಾದ ಆಹಾರ ಮತ್ತು ಜೀವನಶೈಲಿ ಬದಲಾವಣೆಯಿಂದ 80% ಜನರಲ್ಲಿ ಮುಟ್ಟು ನಿಯಮಿತವಾಗುತ್ತದೆ ಮತ್ತು ಗರ್ಭಧಾರಣೆಯೂ ಸಾಧ್ಯವಾಗುತ್ತದೆ.

ಮುಖ್ಯವಾದದ್ದು ತಾಳ್ಮೆ. ನಿಮ್ಮ ದೇಹವನ್ನು ಅರ್ಥಮಾಡಿಕೊಂಡು, ಪ್ರಕೃತಿಯೊಂದಿಗೆ ಸ್ನೇಹ ಮಾಡಿದರೆ PCOS ನಿಂದ ಸಂಪೂರ್ಣವಾಗಿ ಹೊರಬರಬಹುದು. ಯಾವುದೇ ಚಿಕಿತ್ಸೆ ಪ್ರಾರಂಭಿಸುವ ಮೊದಲು ಅರ್ಹ ಆಯುರ್ವೇದ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.

ನಿಮ್ಮ ಆರೋಗ್ಯವೇ ನಿಮ್ಮ ಐಶ್ವರ್ಯ. ಅದನ್ನು ಕಾಪಾಡಿಕೊಳ್ಳಿ.











































error: Content is protected !!
Scroll to Top