ಪರಶುರಾಮ ಥೀಂ ಪಾರ್ಕ್‌ ಸಾರ್ವಜನಿಕ ಮುಕ್ತಗೊಳಿಸುವಂತೆ ಜನಾಗ್ರಹ ಸಭೆ

ಕಾರ್ಕಳ : ಪರಶುರಾಮ ಥೀಂ ಪಾರ್ಕ್‌ ಕುರಿತಾದ ಕಾಂಗ್ರೆಸ್‌ ಹುನ್ನಾರ ಇದೀಗ ಬಹಿರಂಗವಾಗುತ್ತಿದೆ. ಥೀಂ ಪಾರ್ಕ್‌ ಕುರಿತಂತೆ ಕಳೆದ 3 ವರ್ಷಗಳಿಂದ ಅವರು ಮಾಡಿರುವ ಉಪದ್ರ ಮರೆಯುವಂತದ್ದಲ್ಲ ಎಂದು ಹಿಂದೂ ಮುಖಂಡ ಮಹೇಶ್‌ ಶೆಣೈ ಹೇಳಿದರು.
ಪರುಶುರಾಮ ಥೀಂ ಪಾರ್ಕ್‌ ಸಾರ್ವಜನಿಕ ಮುಕ್ತಗೊಳಿಸುವಂತೆ ಆಗ್ರಹಿಸಿ ಸೆ. 24ರಂದು ಬೈಲೂರು ಮಾರಿಗುಡಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ನವರು ಥೀಂ ಪಾರ್ಕ್ ಗೆ ಹೋಗುವ ರಸ್ತೆಗೆ ಮಣ್ಣು ಸುರಿದು ಅಡ್ಡಿಪಡಿಸಿದ್ದಾರೆ. ಶಾಸಕರನ್ನು ಅಪಹಾಸ್ಯ ಮಾಡಿದ್ದಾರೆ. ಅವರ ಷಡ್ಯಂತ್ರ ಎಲ್ಲವೂ ಬಹಿರಂಗವಾಗಿದೆ ಎಂದು ಮಹೇಶ್‌ ಹೇಳಿದರು.

ಕಾಂಗ್ರೆಸ್‌ ಷಡ್ಯಂತ್ರಕ್ಕೆ ಥೀಂ ಪಾರ್ಕ್‌ ಬಲಿ
ಉದ್ಯಮಿ ಉದಯ್ ಹೆಗ್ಡೆ ಎರ್ಲಪಾಡಿ ಮಾತನಾಡಿ, ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್ ಆಗುತ್ತಿದೆ ಎಂದು ಸ್ಥಳೀಯರು ಉದ್ಯಮ ಸ್ಥಾಪನೆಗೆ ಮುಂದಾಗಿದ್ದರು. ಆದರೆ, ಕಾಂಗ್ರೆಸ್‌ನವ ಷಡ್ಯಂತ್ರಕ್ಕೆ ಪರಶುರಾಮ ಥೀಂ ಪಾರ್ಕ್‌ ಬಲಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವವರು ಪರಶುರಾಮ ಥೀಂ ಪಾರ್ಕ್ ವೀಕ್ಷಣೆಗೆ ಬರುವಂತಾಗಬೇಕು. ನಮ್ಮ ಬೇಡಿಕೆ ಇಷ್ಟೇ ಪರಶುರಾಮ ಥೀಂ ಪಾರ್ಕ್ ಮೇಲಿನ ನಿರ್ಬಂಧ ತೆರವುಗೊಳಿಸಬೇಕು. ಅಪೂರ್ಣಗೊಂಡಿರುವ ಮೂರ್ತಿಯನ್ನು ಪೂರ್ಣಗೊಳಿಸಬೇಕು ಎಂದರು.

ಆಣೆ ಪ್ರಮಾಣಗಳಿಗೆ ಅವಕಾಶವಿಲ್ಲ
ಕಾರ್ಕಳ ಮಾರಿಯಮ್ಮನ ಕ್ಷೇತ್ರ ಭಕ್ತಾದಿಗಳಿಗೆ ಸೇರಿದ್ದು. ಇಲ್ಲಿ ಆಣೆ ಪ್ರಮಾಣಗಳಿಗೆ ಅವಕಾಶ ಇಲ್ಲ. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಇದನ್ನು ತಿಳಿದುಕೊಳ್ಳಲಿ ಎಂದು ಹೇಳಿದ ಸುಮಿತ್‌ ಶೆಟ್ಟಿ, ಕಾಂಗ್ರೆಸ್ ನ ಚಿಲ್ಲರೆ ಅಧ್ಯಕ್ಷರೇ, ಈ ವಿಷಯದಲ್ಲಿ ರಾಜಕೀಯ ಮಾಡಲು ಬರಬೇಡಿ. ಇನ್ನು ಮುಂದೆ ಪರಶುರಾಮ ಥೀಂ ಪಾರ್ಕ್ ಬಗ್ಗೆ ನಿರಂತರ ಹೋರಾಟ, ಧರಣಿ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿಗೆ ಮನವಿ
ಪರಶುರಾಮ ಥೀಮ್‌ ಪಾರ್ಕ್‌ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಅಕ್ಟೋಬರ್ 9ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ 2 ಸಾವಿರ ಮಂದಿ ಸೇರಿ ಧರಣಿ ಮಾಡಲಿದ್ದೇವೆ ಎಂದು ಸುಮಿತ್‌ ಹೇಳಿದರು.

ನ್ಯಾಯವಾದಿ ಸದಾನಂದ ಸಾಲಿಯಾನ್‌, ಉದ್ಯಮಿ ರಮೇಶ್‌ ಕಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಚ್ಚಿದಾನಂದ ಶೆಟ್ಟಿ, ಸುಧೀರ್ ಹೆಗ್ಡೆ, ಸಂತೋಷ್ ವಾಗ್ಲೆ, ಪ್ರಶಾಂತ್ ಶೆಟ್ಟಿ, ಸುರೇಶ್ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೇಶ್‌ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು.















































































error: Content is protected !!
Scroll to Top