ಹಿರಿಯ ನಾಗರಿಕರು ಮತ್ತು ಕಾನೂನು

60 ವರ್ಷ ದಾಟಿದ ಪ್ರತಿಯೊಬ್ಬ ನಾಗರಿಕರನ್ನು ನಮ್ಮ ದೇಶದ ಕಾನೂನು ಹಿರಿಯ ನಾಗರಿಕರೆಂಬುದಾಗಿ ಪರಿಗಣಿಸಿ ಅವರಿಗೆ ಸರ್ಕಾರದ ವತಿಯಿಂದ ವಿಶೇಷ ಸೌಲಭ್ಯಗಳನ್ನು, ಹಕ್ಕು ಮತ್ತು ಕಾನೂನಿನ ರಕ್ಷಣೆ ನೀಡುವುದಕ್ಕಾಗಿ ‘ತಂದೆ ತಾಯಿಯ ಮತ್ತು ಹಿರಿಯ ನಾಗರಿಕರ ಪಾಲನೆ – ಪೋಷಣೆ ಮತ್ತು ಶ್ರೇಯೊಭಿವೃದ್ದಿ ಅಧಿನಿಯಮ-2007’ ಎಂಬ ನಾಮಾಂಕಿತದ ವಿಶೇಷವಾದ ಕಾನೂನನ್ನು ಜಾರಿಗೆ ತಂದಿರುತ್ತದೆ.

ಹಿರಿಯರು ಕೇವಲ ವಯಸ್ಸಿನಲ್ಲಿ ಮಾತ್ರ ಹಿರಿಯರಾಗಿರದೇ ಅವರವರ ಕುಟುಂಬ ಮಾಹಿತಿ ಮತ್ತು ಅನುಭವವನ್ನು ಹೊಂದಿರುವ ಕಾರಣದಿಂದಾಗಿ ಸಮಾಜದ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿರುತ್ತಾರೆ. ಈ ಕಾರಣದಿಂದ ಹಿರಿಯ ನಾಗರಿಕರಿಗೆ ಅವರ ಜೀವನ ನಿರ್ವಹಣೆ, ಆರೋಗ್ಯ, ಕಲ್ಯಾಣ ಮತ್ತು ಸುರಕ್ಷತೆಯನ್ನು ಒದಗಿಸುವ ಉದ್ದೇಶದಿಂದ ಸರಕಾರವು ಈ ಮೇಲೆ ಹೇಳಿದ ಕಾನೂನನ್ನು ಜಾರಿಗೊಳಿಸಿದೆ. ಈ ಕಾನೂನಿನ ನಿಯಮಾನುಸಾರದ ಪ್ರಕಾರ ವಯಸ್ಸಾದ ತಂದೆ-ತಾಯಿಯನ್ನು ಅಥವಾ ಕುಟುಂಬದ ಹಿರಿಯ ನಾಗರಿಕರನ್ನು ನಿರ್ಲಕ್ಷಿಸದೇ ಅವರನ್ನು ಗೌರವಿಸುವುದು ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಜವಾಬ್ದಾರಿ ಮಾತ್ರವಾಗಿರದೇ ಸ್ವಂತ ಅದಾಯದಿಂದ ತಮ್ಮನ್ನು ತಾವು ನಿರ್ವಹಿಸಿಕೊಳ್ಳಲು ಅಸಾಧ್ಯವಾದ ತಂದೆ –ತಾಯಿ ಮತ್ತು ಕುಟುಂಬದ ಹಿರಿಯ ನಾಗರಿಕರಿಗೆ ಅಗತ್ಯವುಳ್ಳ ಜೀವನಾಂಶ ಇತ್ಯಾದಿಗಳನ್ನು ನೀಡುವ ಕಾನೂನುಬದ್ಧ ಜವಾಬ್ದಾರಿಯನ್ನು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುತ್ತಾನೆ. ಈ ಹೊಣೆಗಾರಿಕೆಗೆ ವಿರುದ್ಧವಾಗಿ ವರ್ತಿಸಿದಲ್ಲಿ ಮತ್ತು ತಂದೆ-ತಾಯಿ ಅಥವಾ ಕುಟುಂಬದ ಹಿರಿಯ ನಾಗರಿಕರನ್ನು ಅವರ ಮಕ್ಕಳು ಅಥವಾ ಕುಟುಂಬದ ಇತರ ಸದಸ್ಯರು ನಿರ್ಲಕ್ಷಿಸಿದಲ್ಲಿ ನೊಂದಿರುವ ತಂದೆ-ತಾಯಿ ಅಥವಾ ಹಿರಿಯ ನಾಗರಿಕರು ತಮ್ಮ ಜೀವನ ನಿರ್ವಹಣೆಗೆ ಅಗತ್ಯವಿರುವ ಜೀವನಾಂಶ ಅಂದರೆ ಆಹಾರ, ಬಟ್ಟೆ, ವಾಸದ ವ್ಯವಸ್ಥೆ ಮತ್ತು ವೈದ್ಯಕೀಯ ಆರೈಕೆ ಮುಂತಾದವುಗಳನ್ನು ಮಕ್ಕಳಿಂದ ಮತ್ತು ಕುಟುಂಬದ ಇತರ ಸದಸ್ಯರಿಂದ ಕೊಡಿಸುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಈ ರೀತಿಯ ಹಕ್ಕು ಪ್ರತಿಯೊಬ್ಬ ಹಿರಿಯ ನಾಗರಿಕನ ಕಾನೂನು ಬದ್ಧ ಹಕ್ಕಾಗಿರುತ್ತದೆ.

ಮೇಲ್ಕಾಣಿಸಿದ ಕಾನೂನಿನ ಅನುಷ್ಠಾನದ ಅಂಗವಾಗಿ ಸರಕಾರವು ಹಿರಿಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ಆರೋಗ್ಯ ಯೋಜನೆಗಳ ಮೂಲಕ ಅರ್ಹ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ವಿಮಾ ಸೌಲಭ್ಯಗಳನ್ನು ಒದಗಿಸಲು ಕೈಗೊಂಡಿರುವ ಕ್ರಮವು ಚಾಲ್ತಿಯಲ್ಲಿದೆ. ಅದುದರಿಂದ ಸರಕಾರವು ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಪ್ರತಿಯೊಬ್ಬ ಹಿರಿಯ ನಾಗರಿಕರು ತಮ್ಮನ್ನು ಹಿರಿಯ ನಾಗರಿಕರೆಂಬುದಾಗಿ ಸರಕಾರದ ದಾಖಲೆಗಳಲ್ಲಿ ನೊಂದಾಯಿಸಿ ಈ ಬಗ್ಗೆ ‘ಹಿರಿಯ ನಾಗರಿಕ’ ಎಂಬ ಬಗ್ಗೆ ಗುರುತಿನ ಕಾರ್ಡ್‌ಗಳನ್ನು ಹೊಂದುವುದರ ಜೊತೆಗೆ ತಮ್ಮ ಆಧಾರ್, ಆರೋಗ್ಯ ಕಾರ್ಡ್, ಬ್ಯಾಂಕ್ ಖಾತೆ ಮುಂತಾದ ಅಗತ್ಯ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕಾಗುತ್ತದೆ.

ಹಿರಿಯ ನಾಗರಿಕರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅಂದರೆ ವೃದ್ದಾಪ್ಯ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಈ ಯೋಜನೆಗಳ ಮಾಹಿತಿಗಾಗಿ ಹಿರಿಯ ನಾಗರಿಕರು ಸಂಬಂಧಪಟ್ಟ ಗ್ರಾಮ ಪಂಚಾಯತ್, ಕಂದಾಯ ಅಧಿಕಾರಿಗಳನ್ನು ಅಥವಾ ಸಂಬಂಧಪಟ್ಟ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಮಾತ್ರವಲ್ಲದೆ, ಈ ಬಗ್ಗೆ ಸೂಕ್ತ ಮಾಹಿತಿ ಅಥವಾ ಸಹಕಾರವನ್ನು ಸ್ಥಳೀಯ ಸರ್ಕಾರಿ ಅಧಿಕಾರಿಗಳು ನೀಡಲು ವಿಫಲರಾದಲ್ಲಿ ನೇರವಾಗಿ ಜಿಲ್ಲೆಯ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ. ಹಿರಿಯ ನಾಗರಿಕರ ಆಸ್ತಿ, ಬ್ಯಾಂಕ್ ಖಾತೆ ಮತ್ತಿತರ ಸೊತ್ತುಗಳನ್ನು ಮೋಸದಿಂದ ಯಾರಾದರೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ನಂತರ ಅವರನ್ನು ನಿರ್ಲಕ್ಷಿಸಿದಲ್ಲಿ ಅಂತಹ ಮೋಸದ ವರ್ಗಾವಣೆಯನ್ನು ಪ್ರಶ್ನಿಸುವ ಕಾನೂನು ಬದ್ಧ ಅಧಿಕಾರವನ್ನು ಸಹಾ ಹಿರಿಯ ನಾಗರಿಕರು ಹೊಂದಿರುತ್ತಾರೆ.

ಒಟ್ಟಾರೆ ಹಿರಿಯ ನಾಗರಿಕರಿಗೆ ಸರಕಾರದ ಅಥವಾ ಕಾನೂನಿನ ರಕ್ಷಣೆಗಿಂತಲೂ ಮುಖ್ಯವಾಗಿ ಬೇಕಾಗಿರುವುದು ಅವರ ಕುಟುಂಬದ ಪ್ರೀತಿ ಮತ್ತು ಗೌರವ. ಆದುದರಿಂದ ಹಿರಿಯ ನಾಗರಿಕರ ಸಲಹೆಗಳನ್ನು ಕೇಳಿ ಗೌರವಿಸಿ ಅವರನ್ನು ಓಲ್ಡ್ ಎಂದು ಪರಿಗಣಿಸುವ ಬದಲಾಗಿ ಗೋಲ್ಡ್ ಎಂದು ಪರಿಗಣಿಸುವ ಸಂಸೃತಿಯನ್ನು ನಮ್ಮ ಯುವ ಪೀಳಿಗೆಯು ಬೆಳೆಸಿ ಉಳಿಸಿಕೊಳ್ಳಬೇಕಾಗಿರುತ್ತದೆ.











































error: Content is protected !!
Scroll to Top