ನವದೆಹಲಿ: ದೇಶಾದ್ಯಂತ ಸೆ. 28 ರಿಂದ 30 ರ ವರೆಗೆ ಬ್ಯಾಂಕ್‌ಗಳ ಮುಷ್ಕರ ನಡೆಯಲಿರುವ ಹಿನ್ನೆಲೆ ಸೆ. 27 ರ ಭಾನುವಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಹಣಕಾಸು ಇಲಾಖೆ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಸೆ. 26 ಮತ್ತು ಸೆ. 27 ರಂದು ಬ್ಯಾಂಕ್‌ಗಳಿಗೆ ರಜೆ ಇದ್ದು, ಸೆ. 28 ರಿಂದ ಸೆ. 30 ರ ವರೆಗೆ ಬ್ಯಾಂಕ್‌ಗಳ ಮುಷ್ಕರ ನಡೆಯಲಿದೆ. ಸತತ 5 ದಿನಗಳ ವರೆಗೆ ಬ್ಯಾಂಕ್ ವಹಿವಾಟು ಸ್ಥಗಿತವಾದಲ್ಲಿ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸೆ. 27 ರ ಭಾನುವಾರ ಎಲ್ಲಾ ಸರ್ಕಾರಿ, ಪ್ರಾದೇಶಿಕ ಬ್ಯಾಂಕುಗಳು ಕಾರ್ಯ ನಿರ್ವಹಿಸುವಂತೆ ತಿಳಿಸಿದೆ.
ಭಾನುವಾರವೂ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ ಲಿಂಲ್ಡ್ ಶಾಖೆಗಳು ಮತ್ತು ಕರೆನ್ಸಿ ಚೆಸ್ಟ್‌ಗಳು ತೆರೆದಿರಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ. ಬ್ಯಾಂಕ್ ಗ್ರಾಹಕರ ಯೋಗಕ್ಷೇಮ ಮತ್ತು ಅನುಕೂಲಕ್ಕೆ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಮುಷ್ಕರವನ್ನು ಹಿಂಪಡೆಯುವಂತೆ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಯೂನಿಯನ್‌ಗಳಿಗೆ ಮನವಿ ಮಾಡಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಬ್ಯಾಂಕಿಂಗ್ ಕ್ಷೇತ್ರದ ಶೇ. 90 ರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ 3 ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಪ್ರಮುಖವಾಗಿ ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಇವರ ಮುಖ್ಯ ಬೇಡಿಕೆಯಾಗಿದೆ. ಇದರೊಂದಿಗೆ ಪಿಂಚಣಿ ನವೀಕರಣ, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಬರುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ ಮರಳಲು ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಇಟ್ಟಿವೆ.
ಮಂಗಳವಾರ ಡೆಪ್ಯುಟಿ ಚೀಫ್ ಲೇಬರ್ ಕಮಿಷನರ್ ಮತ್ತು ಯುಎಫ್‌ಬಿಯು ಪ್ರತಿನಿಧಿಗಳ ನಡುವೆ ನಡೆದ ಸಂಧಾನ ಸಭೆಯು ಯಾವುದೇ ನಿರ್ಧಾರವಿಲ್ಲದೆ ಅಂತ್ಯಗೊಂಡಿದೆ. ಐದು ದಿನಗಳ ಬ್ಯಾಂಕಿಂಗ್ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸಕಾರಾತ್ಮಕ ನಿರ್ಧಾರ ಬಂದರೆ ಮಾತ್ರ ಮುಷ್ಕರ ಕೈಬಿಡುವ ಬಗ್ಗೆ ಯೋಚಿಸುವುದಾಗಿ ಯೂನಿಯನ್ ಹೇಳಿದೆ.




















