ಬೆಂಗಳೂರು: ನವೆಂಬರ್ ಒಂದರ ಮುನ್ನವೇ ಲೈಸನ್ಸ್ ಇಲ್ಲದ ಬಂದೂಕು ಹೊಂದಿರುವವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ.
ಸಾಮಾನ್ಯವಾಗಿ ಅರಣ್ಯ ಪ್ರದೇಶದ ಸಮೀಪ ವಾಸಿಸುವವರು ಬಂದೂಕು ಹೊಂದಿರುತ್ತಾರೆ. ಅವುಗಳಲ್ಲಿ ಕೆಲವು ಬಂದೂಕುಗಳು ಪರವಾನಗಿ ಹೊಂದಿರುವುದಿಲ್ಲ. ಕೇವಲ ಆತ್ಮರಕ್ಷಣೆಗೆ ಬಳಕೆ ಮಾಡಬೇಕಾದ ಬಂದೂಕುಗಳನ್ನು ಕೆಲವು ಕಾಡು ಪ್ರಾಣಿಗಳ ಬೇಟೆಗೂ ಬಳಕೆ ಮಾಡುತ್ತಾರೆ. ಈಗ ಕಾಡಿನಂಚುಗಳಲ್ಲಿಯೂ ಕೆಮರಾ ವ್ಯವಸ್ಥೆ ಮಾಡಲಾಗಿದ್ದು ಇಂತಹ ಕೃತ್ಯಗಳು ಬೆಳಕಿಗೆ ಬರುತ್ತವೆ ಎಂದು ತಿಳಿಸಿದ್ದಾರೆ.
ಲೈಸೆನ್ಸ್ ಹೊಂದಿರದ ಬಂದೂಕುಗಳನ್ನು ಆಯಾ ವ್ಯಾಪ್ತಿಯ ಠಾಣೆಗೆ ಒಪ್ಪಿಸುವಂತೆ ಶಾಸಕರುಗಳು ಜನರ ಮನವೊಲಿಸಬೇಕು. ನಿಜವಾಗಿಯೂ ಬಂದೂಕು ಅವಶ್ಯ ಎನ್ನುವವರಿಗೆ ಸರ್ಕಾರ ಪರವಾನಗಿ ನೀಡುತ್ತದೆ ಎಂದು ಹೇಳಿದ್ದಾರೆ.

ಜೀವ ಭಯ ಇರುವವರು, ಗಣ್ಯರ ಗನ್ ಮ್ಯಾನ್‌ಗಳು, ಬ್ಯಾಂಕ್ ಇನ್ನಿತರ ಭದ್ರತೆ ವೇಳೆ, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಹಾಗೂ ಶೂಟಿಂಗ್ ಕ್ರೀಡೆಗಾಗಿ ಮಾತ್ರ ಗನ್ ಬಳಕೆ ಮಾಡಲು ಅವಕಾಶ ಇದೆ. ರಾಜ್ಯದಲ್ಲಿ ಬಂದೂಕು ಲೈಸೆನ್ಸ್ ಪಡೆಯಲು ವ್ಯಕ್ತಿಗೆ 21 ವರ್ಷವಾಗಿರಬೇಕು. ದೈಹಿಕ ಹಾಗೂ ಮಾನಸಿಕ ಸ್ಥಿರತೆ ಇರಬೇಕು. ಅಪರಾಧದ ಹಿನ್ನೆಲೆ ಇದ್ದರೆ ಗನ್ ಲೈಸೆನ್ಸ್ ಸಿಗೋದಿಲ್ಲ. ಅರ್ಜಿ ಸಲ್ಲಿಸಿದ ನಂತರ ಪೊಲೀಸರು ಮನೆ ಅಥವಾ ಮನೆಯ ಸುತ್ತಮುತ್ತ ವಿಚಾರಣೆ ನಡೆಸಿ, ಸಂದರ್ಶನ ಮಾಡಿ ನಂತರ ಲೈಸೆನ್ಸ್ ನೀಡುತ್ತಾರೆ.





















