ಬೊಕ್ಕಸದಲ್ಲಿ ಹಣವಿಲ್ಲದಿರುವುದರಿಂದ ಹೊಸ ಯೋಜನೆ ಘೋಷಣೆ ಬೇಡ ಎಂದು ಹಣಕಾಸು ಇಲಾಖೆ ಟಿಪ್ಪಣಿ
ಕರಾವಳಿಗೆ ಘೋಷಿಸಿದ 32,611 ಕೋಟಿ ಅಭಿವೃದ್ಧಿ ಯೋಜನೆ ಬರೀ ಬೋಗಸ್ ಎಂದ ಬಿಜೆಪಿ
ಬೆಂಗಳೂರು : ರಾಜ್ಯಕ್ಕೆ ತೀವ್ರ ಬರಗಾಲ ಬಂದಿರುವ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಭಾರಿ ಮೊತ್ತ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಹೊಸ ಯಾವುದೇ ಯೋಜನೆಯನ್ನು ಘೋಷಿಸಬಾರದು ಎಂದು ಹಣಕಾಸು ಇಲಾಖೆ ಸರಕಾರಕ್ಕೆ ಸೂಚಿಸಿರುವುದು ಈಗ ಭಾರಿ ಚರ್ಚೆಗೀಡಾಗಿದೆ. ವಿಶೇಷ ಅಧಿವೇಶನ ನಡೆಯುತ್ತಿರುವಾಗಲೇ ಹಣಕಾಸು ಇಲಾಖೆ ಹೊಸ ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸರಕಾರಕ್ಕೆ ಮುಜುಗರ ಉಂಟುಮಾಡಿದ್ದರೆ ವಿಪಕ್ಷ ಬಿಜೆಪಿಗೆ ಸರಕಾರದ ಮೇಲೆ ದಾಳಿ ಮಾಡಲು ಹೊಸತೊಂದು ಅಸ್ತ್ರವನ್ನು ಒದಗಿಸಿದೆ.

ಡಿ.ಕೆ.ಶಿವಕುಮಾರ್ ಸರಕಾರ 100 ದಿನಗಳ ಸಂಭ್ರಮದಲ್ಲಿರುವಾಗಲೇ ಹಣಕಾಸು ಇಲಾಖೆ ಬೇಕಾಬಿಟ್ಟಿಯಾಗಿ ಹೊಸ ಯೋಜನೆಗಳನ್ನು ಘೋಷಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆಗಳ ಘೋಷಣೆ ಹಾಗೂ ವೆಚ್ಚದ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ವಾಸ್ತವಿಕ ನಿಲುವು ತಳೆಯುವಂತೆ ಹಣಕಾಸು ಇಲಾಖೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಹಣಕಾಸಿನ ಒತ್ತಡದಿಂದಾಗಿ ಸದ್ಯ ವೆಚ್ಚ ನಿರ್ವಹಣೆ, ವೇತನ ಪಾವತಿ ಮತ್ತು ಸಬ್ಸಿಡಿ ಪಾವತಿಗಳ ಮೇಲೂ ಪರಿಣಾಮ ಬೀರುತ್ತಿದೆ.
ಕಳೆದ ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಿ ಕರಾವಳಿಯ ಅಭಿವೃದ್ಧಿಗೆ 32,611 ಕೋಟಿ ರೂಪಾಯಿಗಳ ಬೃಹತ್ ಅಭಿವೃದ್ಧಿ ಪ್ಯಾಕೇಜನ್ನು ಸರಕಾರ ಘೋಷಿಸಿತ್ತು. ಈ ಘೋಷಣೆ ಬರೀ ಪ್ರಚಾರದ ಗಿಮಿಕ್ ಎಂದು ಬಿಜೆಪಿ ಟೀಕಿಸಿದೆ. ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಸಹಿತ ಹಲವು ಮುಖಂಡರು ಕರಾವಳಿಯ ಈ ಬೃಹತ್ ಮೊತ್ತವನ್ನು ಎಲ್ಲಿಂದ ತರುತ್ತೀರಿ ಎಂದು ಸ್ಪಷ್ಟಪಡಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ಸಚಿವ ಸಂಪುಟ ನಡೆಸಿ ದೊಡ್ಡ ದೊಡ್ಡ ಭರವಸೆ ನೀಡಿದ್ದೀರಿ. ಈಗ ಹಣಕಾಸು ಇಲಾಖೆಯೇ ನಿಮ್ಮ ಬಂಡವಾಳವನ್ನು ಬಯಲು ಮಾಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಚಾರದ ತೆವಲಿಗಾಗಿ ವಿವಿಧೆಡೆ ಸಂಪುಟ ಸಭೆಗಳನ್ನು ನಡೆಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಬಾರಿ ಕರ್ನಾಟಕದಲ್ಲಿ ಮುಂದುವರಿದಿರುವ ಮುಂಗಾರು ಕೊರತೆ ಮತ್ತು ಬರ ಪರಿಸ್ಥಿತಿಯಿಂದಾಗಿ ರೈತರಿಗೆ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರು ಪೂರೈಕೆಗೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 4,000-5,000 ಕೋಟಿ ರೂಪಾಯಿ ಹೊರೆ ಬೀಳುವ ಅಂದಾಜಿದೆ. ಹೆಚ್ಚುವರಿ ಯೋಜನೆಗಳಿಗೆ ಹಣ ಮಂಜೂರು ಮಾಡುವ ಮೊದಲು ಹೊಸ ಆದಾಯ ಮೂಲಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು ಎಂದು ಹಣಕಾಸು ಇಲಾಖೆ ಸರಕಾರಕ್ಕೆ ಹೇಳಿದೆ.
ಸತತವಾಗಿ ಹೊಸ ಯೋಜನೆಗಳನ್ನು ಘೋಷಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಣಕಾಸು ಇಲಾಖೆ ‘ವಾಸ್ತವಿಕವಾಗಿರಿ’ ಎಂದು ಸೂಚಿಸಿದ್ದು, ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಡೀಕರಿಸದೆ ಹೊಸ ಯೋಜನೆಗಳಿಗೆ ಹಣ ಒದಗಿಸುವುದು ಕಷ್ಟಕರವಾಗಲಿದೆ ಎಂದು ತಿಳಿಸಿದೆ. ಈಗಾಗಲೇ ಹಣಕಾಸಿನ ಮುಗ್ಗಟ್ಟಿನಿಂದ ವೇತನ ಮತ್ತು ಸಬ್ಸಿಡಿ ಪಾವತಿಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಇಲಾಖೆ ಹೇಳಿದೆ. ಲಭ್ಯವಿರುವ ಹಣಕಾಸಿನ ಮಿತಿಯ ಬಗ್ಗೆ ವಾಸ್ತವಿಕ ನಿಲುವು ತಳೆಯುವುದು ಸೂಕ್ತ ಎಂದು ಹಣಕಾಸು ಇಲಾಖೆ ಆಂತರಿಕ ಟಿಪ್ಪಣಿಯಲ್ಲಿ ತಿಳಿಸಿದೆ.
ಈಗಾಗಲೇ ಸಾರಿಗೆ ನಿಗಮಗಳು, ನೀರಾವರಿ ಸಂಸ್ಥೆಗಳು ಮತ್ತು ವಿದ್ಯುತ್ ಕಂಪನಿಗಳಲ್ಲಿನ ವೇತನ ಪಾವತಿಗಳ ಮೇಲೂ ಹಣಕಾಸಿನ ಮುಗ್ಗಟ್ಟು ಪರಿಣಾಮ ಬೀರುತ್ತಿದೆ. ಅಲ್ಲದೆ, ಸಬ್ಸಿಡಿ ಪಾವತಿಗಳು ಮತ್ತು ಇತರ ಮಾಸಿಕ ಪಾವತಿಗಳಲ್ಲೂ ಬಾಕಿ ಉಂಟಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಬಜೆಟ್‌ನಲ್ಲಿ ನಿಗದಿಪಡಿಸಿದ ದುಬಾರಿ ಯೋಜನೆಗಳನ್ನು ಆರಂಭಿಸುವುದರಿಂದ ಹಣದ ಹರಿವು ಮತ್ತು ಹಣಕಾಸು ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾಗಲಿವೆ ಎಂದು ಇಲಾಖೆ ಎಚ್ಚರಿಸಿದೆ. ಹೊಸ ಪ್ರಸ್ತಾವನೆಗಳಿಗೆ ಹಣ ಒದಗಿಸಲು ಇತರ ಇಲಾಖೆಗಳ ಅನುದಾನದಲ್ಲಿ ಕಡಿತ ಮಾಡಬೇಕಾಗುತ್ತದೆ. ಇದರಿಂದ ಇತರ ಕಾಮಗಾರಿಗಳು ವಿಳಂಬವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು ಎಂದು ಹಣಕಾಸು ಇಲಾಖೆ ತಿಳಿಸಿದೆ.
ಇದರರ್ಥ, ತಮಗಿಂತ ಮೊದಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಘೋಷಿಸಿದ್ದ ಕಾರ್ಯಕ್ರಮಗಳಲ್ಲಿ ಕಡಿತ ಮಾಡುವ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗಬಹುದು. ಇದರಿಂದ ತಮ್ಮ ಹೊಸ ಯೋಜನೆಗಳಿಗೆ ಹಣಕಾಸಿನ ಅವಕಾಶ ಸೃಷ್ಟಿಸಿಕೊಳ್ಳಬೇಕಾಗಬಹುದು.
2026-27ನೇ ಸಾಲಿನ ಬಜೆಟ್ ಅಗತ್ಯಗಳನ್ನು ಪೂರೈಸಲು ಕರ್ನಾಟಕ ಈಗಾಗಲೇ ತನ್ನ ಸಾಲ ಪಡೆಯುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ಹೀಗಾಗಿ ಯಾವುದೇ ಹೊಸ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯಕ್ಕೆ ಮತ್ತಷ್ಟು ಸಾಲ ಪಡೆಯಲು ಅವಕಾಶವಿರುವುದಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಕರ್ನಾಟಕ ಆದಾಯ ಕೊರತೆಯನ್ನು ಎದುರಿಸುತ್ತಿದ್ದು, ರಾಜ್ಯದ ಆದಾಯದ ದೊಡ್ಡ ಭಾಗ ವೇತನ, ಪಿಂಚಣಿ, ಸಬ್ಸಿಡಿ ಮತ್ತು ಬಡ್ಡಿ ಪಾವತಿಗಳಿಗೆ ವ್ಯಯವಾಗುತ್ತಿದೆ. ‘ಗ್ಯಾರಂಟಿ ಯೋಜನೆಗಳಿಗೆ’ ವಾರ್ಷಿಕವಾಗಿ ಸುಮಾರು 50,000 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.
ಸರಕಾರ ಸಂಪೂರ್ಣ ದಿವಾಳಿಯಾಗಿದೆ ಎನ್ನುವುದು ಹಣಕಾಸು ಇಲಾಖೆಯ ಟಿಪ್ಪಣಿಯಿಂದ ಬಯಲಾಗಿದೆ. ಮುಖ್ಯಮಂತ್ರಿಗಳು ಪ್ರಚಾರದ ಗೀಳಿಗಾಗಿ ಕಲಬುರಗಿ, ಮಂಗಳೂರು ಮುಂತಾದೆಡೆ ಹೋಗಿ ಸಂಪುಟ ಸಭೆಗಳನ್ನು ಮಾಡಿ ಬೋಗಸ್ ಘೋಷಣೆಗಳನ್ನು ಮಾಡುತ್ತಿದ್ದಾರೆ. ದಿವಾಳಿ ಆಗಿಲ್ಲ ಎಂದರೆ ಸರಕಾರ ಶ್ವೇತಪತ್ರ ಹೊರಡಿಸಲಿ. ಬಳಿಕ ಆ ಬಗ್ಗೆ ಚರ್ಚೆ ಮಾಡೋಣ. ಕುಸಿದು ಬಿದ್ದ ಆಡಳಿತ ವ್ಯವಸ್ಥೆಯನ್ನು ಮರೆಮಾಚಲು ಬೇರೆ ಬೇರೆ ಕಡೆ ಸಚಿವ ಸಂಪುಟ ಘೋಷಣೆ ಮಾಡುತ್ತಿದ್ದಾರೆ. ಹಣಕಾಸು ಇಲಾಖೆ ಸರಕಾರವನ್ನು ಎಚ್ಚರಿಸಿರುವ ನಡೆ ಸರಿ ಇದೆ. ⭕ ಸುನೀಲ್ ಕುಮಾರ್, ಕಾರ್ಕಳದ ಶಾಸಕ




















