ಶಾರ್ಜಾದಲ್ಲಿ ಉಡುಪಿಯ ಪ್ರಕಾಶ್ ಕುಂದರ್ ಹತ್ಯೆ: ಪತ್ನಿ, ಪುತ್ರ ನಾಪತ್ತೆ

ಉಡುಪಿ: ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದ ಉಡುಪಿ ಮೂಲದ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಅವರ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.

ಪ್ರಕಾಶ್ ಅವರು ಪತ್ನಿ ಟೀನಾ ಮತ್ತು ಪುತ್ರನ ಜೊತೆಗೆ ಶಾರ್ಜಾದಲ್ಲಿ ‌ವಾಸವಾಗಿದ್ದರು. ಸಹೋದರ ಪ್ರಶಾಂತ್ ಕುಂದರ್ ಅವರು ಪ್ರಕಾಶ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು, ಸಾಧಾರಣವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಅವರು ಆ ಬಾರಿ ಟೆಕ್ಸ್ಟ್ ಸಂದೇಶಗಳನ್ನು ಕಳಿಸಿದ್ದರು. ಆಗ ಪ್ರಶಾಂತ್ ಅವರು ತಮ್ಮೊಂದಿಗೆ ಮಾತನಾಡುವಂತೆ ಹೇಳಿದ್ದು ನಂತರ ಸಂಪರ್ಕ ಸ್ಥಗಿತವಾಗಿತ್ತು. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿತ್ತು.

ಬಳಿಕ ಕುಟುಂಬಸ್ಥರು ಅವರು ಕೆಲಸ ಮಾಡುತ್ತಿದ್ದ ಕಂಪೆನಿಯ ಜೊತೆ ಮಾಹಿತಿ ಕೇಳಿದ್ದು, ಅವರು ಭಾರತಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಅವರು ಭಾರತಕ್ಕೆ ಬಂದಿಲ್ಲವಾದರಿಂದ ಶಾರ್ಜಾದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುವಾಗ ಪ್ರಕಾಶ್ ಅವರದ್ದೇ ಕಾರಿನಲ್ಲಿ ಅವರ ಶವ ಪತ್ತೆಯಾಗಿತ್ತು. ಶವದ ಮೇಲೆ ಗಾಯದ ಗುರುತುಗಳಿದ್ದವು. ಶವವನ್ನು ಹಲವು ತುಂಡುಗಳನ್ನಾಗಿ ಮಾಡಲಾಗಿತ್ತು ಎಂದೂ ಹೇಳಲಾಗುತ್ತಿದೆ. ಎಲ್ಲಾ ಕಾನೂನು ಪ್ರಕ್ರಿಯೆಗಳ ಬಳಿಕ ಶವವನ್ನು ಭಾರತಕ್ಕೆ ತರಲಾಗುತ್ತದೆ ಎಂದು ಮಾಹಿತಿ ಇದೆ.

ಪ್ರಕಾಶ್ ಪತ್ನಿ ಟೀನಾ ಮತ್ತು ಪುತ್ರ ನಾಪತ್ತೆಯಾಗಿದ್ದು ಇದು ಪ್ರಕಾಶ್ ಸಾವಿಗೆ ಸಂಬಂಧಿಸಿದ ಹಾಗೆ ಹಲವಾರು ಸಂದೇಹಗಳಿಗೆ ಕಾರಣವಾಗಿದೆ.









































error: Content is protected !!
Scroll to Top