ಕೋಟಿತೀರ್ಥ ಪುಷ್ಕರಿಣಿಗೆ ಹಾರಿ ಯುವಕ ಆತ್ಮಹತ್ಯೆ

ಕುಂದಾಪುರ: ಯುವಕನೊಬ್ಬ ಕೋಟೇಶ್ವರದ ಕೋಟಿತೀರ್ಥ ಪುಷ್ಕರಿಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೊದ್ರಾಳಿ, ಕೊಳನಕಟ್ಟೆ ನಿವಾಸಿ ಪದ್ಮನಾಭ ಆಚಾರ್ಯ (37) ಎಂಬವರೇ ಮೃತಪಟ್ಟ ‌ವ್ಯಕ್ತಿ.

ಪದ್ಮನಾಭ ಅವರು ಕುಂದಾಪುರದ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲ ತಿಂಗಳುಗಳಿಂದ ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ. ಅವರು ಮಂಗಳವಾರ ಮನೆಯಿಂದ ಬೆಳಗ್ಗೆ ಹೋದವರು ರಾತ್ರಿಯಾದರೂ ಮನೆಗೆ ಬಂದಿಲ್ಲ. ದೇವಸ್ಥಾನದ ಸಮೀಪ ಅವರ ಬೈಕ್ ಪತ್ತೆಯಾಗಿತ್ತು. ಮನೆಯವರು ಹುಡುಕಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಕೋಟಿತೀರ್ಥ ಪುಷ್ಕರಿಣಿ ಸಮೀಪ ಅವರ ಚಪ್ಪಲಿ ಪತ್ತೆಯಾದ ಹಿನ್ನೆಲೆ ಬುಧವಾರ ಕೆರೆಯಲ್ಲಿ ಶೋಧಕಾರ್ಯ ‌ನಡೆಸಲಾಗಿದೆ.

ಕೆರೆಯಲ್ಲಿ ಈಜಲು ಬರುವ ಮಾರ್ಕೋಡು ಸುಧೀರ್ ಕುಮಾ‌ರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಮಂಜ ಮೊದಲಾದವರು ಬೋಟ್ ಸಹಾಯದಿಂದ ನೀರಿನಲ್ಲಿ ಶೋಧ ನಡೆಸಿದ್ದು 9 ಗಂಟೆಯ ವೇಳೆ ಮೃತದೇಹ ನೀರಿನಲ್ಲಿರುವುದು ತಿಳಿದುಬಂದಿದೆ. ಇದೇ ಸಮಯಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ತಂಡ ನೀರಿಗಿಳಿದು ಸ್ಥಳೀಯ ಈಜುಗಾರರ ನೆರವಿನಲ್ಲಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.









































error: Content is protected !!
Scroll to Top