ವಡೋದರಾ: ದೇಶದ ಪ್ರತಿಷ್ಠಿತ ಸಿನೆಮಾ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಯನ್ನು ಕನ್ನಡದ ಹಿರಿಯ ನಟ ಅನಂತನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್ ಏಕತಾನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಿದರು.
ಪುರಸ್ಕಾರ ಪಡೆದ ಬಳಿಕ ಮಾತನಾಡಿದ ಅನಂತನಾಗ್, ರಾಷ್ಟ್ರಪತಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಈ ಪ್ರಶಸ್ತಿ ನನ್ನ ಪಾಲಿಗೆ ವಿಶೇಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಅತ್ಯಂತ ಗೌರವದ ಸಂಗತಿ. ಈ ಪ್ರಶಸ್ತಿಯ ಮಹತ್ವ ಮತ್ತು ಅದರ ಭವ್ಯತೆಯನ್ನು ಇನ್ನೂ ಸಂಪೂರ್ಣವಾಗಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇಂತಹ ಸಮಾರಂಭಗಳಲ್ಲಿ ನಾನು ಹೆಚ್ಚು ಭಾಗವಹಿಸಿಲ್ಲ. ಆದರೆ ಇಂದು ನಿಮ್ಮೆಲ್ಲರೊಂದಿಗೆ ಇಲ್ಲಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಪ್ರಶಸ್ತಿ ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಈ ಪ್ರಶಸ್ತಿ ನನಗೊಬ್ಬರಿಗೆ ಸೇರಿದ್ದಲ್ಲ: ಈ ಪ್ರಶಸ್ತಿ ನಿರ್ಮಾಪಕ, ಬರಹಗಾರ, ನಿರ್ದೇಶಕ, ಮೇಕಪ್ ಕಲಾವಿದ ಮತ್ತು ನನ್ನೊಂದಿಗೆ ಅವಿಶ್ರಾಂತವಾಗಿ ಕೆಲಸ ಮಾಡಿದ ಎಲ್ಲಾ ಹುಡುಗಿಯರು ಮತ್ತು ಹುಡುಗರಿಗೂ ಸೇರಿದೆ ಎಂದು ತಿಳಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕ, ಪೋಷಕ ನಟ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ಪ್ರೇಕ್ಷಕರನ್ನು ಸೆಳೆಯುವ ಜೊತೆಗೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.




















