ಕಾರ್ಕಳ : 2123ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ

ಸ್ವಪ್ರೇರಣೆಯಿಂದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ – ಹರಿಕೃಷ್ಣ ಭಟ್

ಕಾರ್ಕಳ : ಮದ್ಯವ್ಯಸನಿಗಳು ಸ್ವಪ್ರೇರಣೆಯಿಂದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನದಿಂದ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬೇಕೆಂದು‌ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ಭಟ್ ಹೇಳಿದರು.
ಸೆ. 22ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕಾರ್ಕಳ, ಜನಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾದ 2123ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇವಸ್ಥಾನದ ಸಾನ್ನಿಧ್ಯದಲ್ಲಿ ಮದ್ಯವರ್ಜನ ಶಿಬಿರ ನಡೆಯುತ್ತಿರುವುದು ಪುಣ್ಯದ ಕಾರ್ಯ. ಮದ್ಯಪಾನವನ್ನು ತ್ಯಜಿಸಿ ಉತ್ತಮ ಜೀವನ ನಡೆಸಲು ಶಿಬಿರಾರ್ಥಿಗಳು ದೃಢ ಸಂಕಲ್ಪ ಕೈಗೊಳ್ಳಬೇಕು ಎಂದರು.

ದೃಢ ಸಂಕಲ್ಪ ಮಾಡಿ
ಮುಖ್ಯ ಅತಿಥಿ, ಕೆಎಂಎಫ್‌ ನಿರ್ದೇಶಕ ಸುಧಾಕರ್‌ ಶೆಟ್ಟಿ ಮುಡಾರು ಮಾತನಾಡಿ, ಒಂದಲ್ಲ ಒಂದು ಕಾರಣದಿಂದ ಮದ್ಯಪಾನದ ವ್ಯಸನಕ್ಕೀಡಾದವರು ಸ್ವಂತ ಇಚ್ಛೆಯಿಂದ ಕುಡಿತವನ್ನು ಬಿಡಲು ಮುಂದೆ ಬರಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂತಹ ಶಿಬಿರಗಳನ್ನು ಏರ್ಪಡಿಸುವುದರಿಂದ ಲಕ್ಷಾಂತರ ಮಂದಿ ದುಶ್ಚಟದಿಂದ ಮುಕ್ತರಾಗುವಂತಾಗಿದೆ ಎಂದರು.

ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವ್ಯಸನಮುಕ್ತರು
ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳಿಂದ ಪೂಜ್ಯ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಈವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವ್ಯಸನಮುಕ್ತ ಜೀವನ ನಡೆಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಎಂಟು ದಿನಗಳ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾರ್ಥನೆ, ಗುಂಪು ಸಲಹೆ, ಗಣ್ಯರಿಂದ ಮಾಹಿತಿ ಹಾಗೂ ಮಾರ್ಗದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಮತ್ತು ಭಜನಾ ಕಾರ್ಯಕ್ರಮಗಳ ಮೂಲಕ ಶಿಬಿರಾರ್ಥಿಗಳಲ್ಲಿ ಮಾನಸಿಕ ಪರಿವರ್ತನೆ ಹಾಗೂ ಉತ್ತಮ ಜೀವನದ ಬಗ್ಗೆ ಆತ್ಮವಿಶ್ವಾಸ ಮೂಡಿಸಲಾಗುತ್ತದೆ ಎಂದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ಬಂಗೇರ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ, ನಿಯೋಜಿತ ಅಧ್ಯಕ್ಷ ವೃಷಭರಾಜ್ ಕಡಂಬ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಮಹಾವೀರ್ ಜೈನ್, ಹರೀಶ್ಚಂದ್ರ ತೆಂಡೂಲ್ಕರ್, ಕಮಲಾಕ್ಷ ನಾಯಕ್ ಜಾರ್ಕಳ, ತಾರನಾಥ್ ಶೆಟ್ಟಿ ಹಿರ್ಗಾನ, ವಲಯಾಧ್ಯಕ್ಷ ವಾಸು ಶೆಟ್ಟಿ, ಕೋಶಾಧಿಕಾರಿ ಉದಯ್ ವಿ. ಶೆಟ್ಟಿ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿದರು. ಯೋಜನೆ ಮೇಲ್ವಿಚಾರಕರಾದ ಗೀತಾ ಹೆಗ್ಡೆ ನಿರೂಪಿಸಿ, ದಿನೇಶ್‌ ಹೆಗ್ಡೆ ವಂದಿಸಿದರು.















































error: Content is protected !!
Scroll to Top