ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿರುವುದಾಗಿ ತಿಳಿದು ಬಂದಿದ್ದು, ಈ ಸಂಬಂಧ ಅಧಿಕೃತ ಆದೇಶ ಶೀಘ್ರವೇ ಪ್ರಕಟಿಸುವ ಸಾಧ್ಯತೆ ಇದೆ.
ಹಾಲು ಉತ್ಪಾದನಾ ವೆಚ್ಚ ಮತ್ತು ನಿರ್ವಹಣೆಯ ವೆಚ್ಚ ಏರುತ್ತಿರುವ ಹಿನ್ನೆಲೆ ನಂದಿನಿ ಹಾಲಿನ ಮಾರಾಟ ದರವನ್ನು ಹೆಚ್ಚಿಸಬೇಕು ಎಂದು ರಾಜ್ಯದ 16 ಹಾಲು ಒಕ್ಕೂಟಗಳ ಸಂಘವು ಸರ್ಕಾರಕ್ಕೆ ತೀವ್ರ ಒತ್ತಡ ಹೇರಿದ್ದವು. ಆರಂಭದಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಏರಿಕೆ ಮಾಡುವಂತೆ ಒಕ್ಕೂಟಗಳು ಬೇಡಿಕೆ ಇಟ್ಟು, ದರ ಏರಿಸದಿದ್ದರೆ ವಿಧಾನಸೌಧ ಚಲೋ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದವು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಂತಿಮವಾಗಿ ಮಧ್ಯಮ ಮಾರ್ಗ ಕಂಡುಕೊಂಡಿದೆ. ಗ್ರಾಹಕರಿಗೆ ವಿಪರೀತ ಆರ್ಥಿಕ ಹೊರೆಯಾಗದಂತೆ ಹಾಗೂ ರೈತರಿಗೂ ಅನುಕೂಲವಾಗುವಂತೆ ಹಾಲಿನ ದರ ಹೆಚ್ಚಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.






















