ಶಿಕ್ಷಣ ಕ್ಷೇತ್ರಕ್ಕೆ ರಾವ್ ಕೊಡುಗೆ ಅನನ್ಯ – ಡಾ. ಪದ್ಮನಾಭ ಕಾಮತ್
ಅಜೆಕಾರು ಜ್ಞಾನಸುಧಾದಲ್ಲಿ ಪಾಂಡುರಂಗ ರಾವ್ ಗ್ರಂಥಾಲಯ ಉದ್ಘಾಟನೆ
ಶಿಕ್ಷಣ ಕ್ಷೇತ್ರಕ್ಕೆ ರಾವ್ ಕೊಡುಗೆ ಅನನ್ಯ – ಡಾ. ಪದ್ಮನಾಭ ಕಾಮತ್
ಕಾರ್ಕಳ : ಕಾರ್ಕಳವು ಶ್ರೇಷ್ಠ ಗಣಿತಜ್ಞರನ್ನು ನಾಡಿಗೆ ನೀಡಿದೆ. ನಿವೃತ್ತ ಶಿಕ್ಷಕ ಕೆ. ಪಾಂಡುರಂಗ ರಾವ್ ಅವರಂತಹ ಮೇಧಾವಿಗಳಿಂದ ಇದು ಸಾಧ್ಯವಾಗಿದೆ ಎಂದು ಕೆಎಂಸಿ ಹೃದ್ರೋಗ ಘಟಕದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಪದ್ಮನಾಭ್ ಕಾಮತ್ ಅವರು ಅಭಿಪ್ರಾಯಪಟ್ಟರು.
ಅವರು ಅ. 15 ರಂದು ಅಜೆಕಾರು ಜ್ಞಾನಸುಧಾದ ಕಾಲೇಜಿನಲ್ಲಿ ಕೆ. ಪಾಂಡುರಂಗ ರಾವ್ ವಾಚನಾಲಯ ಉದ್ಘಾಟಿಸಿ ಬಳಿಕ ಮಾತನಾಡಿದರು. ಕಾಲೇಜಿನ ವಾಚನಾಲಯಕ್ಕೆ ಓರ್ವ ಆದರ್ಶ ಶಿಕ್ಷಕ ಪಾಂಡುರಂಗ ರಾವ್ ಅವರ ಹೆಸರನ್ನಿಟ್ಟಿರುವುದು ಅತ್ಯಂತ ಅರ್ಥಪೂರ್ಣ ಎಂದರು.

ಮೆಡಿಕಲ್ ಕಾಲೇಜು ಸ್ಥಾಪಿಸಿ
ಡಾ. ಸುಧಾಕರ್ ಶೆಟ್ಟಿ ಅವರು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮೂಲಕ ಮೌಲ್ಯಧಾರಿತ ಶಿಕ್ಷಣ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡಾ. ಸುಧಾಕರ್ ಶೆಟ್ಟಿ ಅವರು ಕಾರ್ಕಳದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತಾಗಲಿ ಎಂದು ಆಶಿಸಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಮಾತನಾಡಿ, ಕೆ. ಪಾಂಡುರಂಗ ರಾವ್ ಅವರು ನಮ್ಮ ನೆಚ್ಚಿನ ಗಣಿತ ಶಿಕ್ಷಕರು. ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕೆಂಬ ನಿಟ್ಟಿನಲ್ಲಿ ಕಾಲೇಜಿನ ಗ್ರಂಥಾಲಯಕ್ಕೆ ಅವರ ಹೆಸರನ್ನಿಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ದೇಶಕ ಯೋಗೇಶ್ ಹೆಗ್ಡೆ, ನಿಸ್ವಾರ್ಥ ಸೇವೆ ಮತ್ತು ವಿದ್ಯಾರ್ಥಿಗಳ ಕುರಿತು ವಿಶೇಷ ಕಾಳಜಿ ಹೊಂದಿದ್ದ ಪಾಂಡುರಂಗ ರಾವ್ ಅವರು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ್ದರು ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸದಸ್ಯ ಗಣಪತಿ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಟ್ರಸ್ಟ್ ಸದಸ್ಯರು, ಜ್ಞಾನಸುಧಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕಿ ದರ್ಶಿನಿ ಕಾರ್ಯಕ್ರಮ ನಿರ್ವಹಿಸಿದರು.





































