ಮೂರು ಪಿಂಚಣಿ ಯೋಜನೆಗಳ ಹೆಸರಿನಲ್ಲಿದ್ದ ‘ಇಂದಿರಾಗಾಂಧಿಗೆ’ ಕೊಕ್

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ನವದೆಹಲಿ: ಜಾರಿಯಲ್ಲಿರುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಹೊಸ ರೂಪ ನೀಡಿದ್ದು, ಅದರ ವ್ಯಾಪ್ತಿಗೆ ಬರುವ ಮೂರು ಪ್ರಮುಖ ಪಿಂಚಣಿ ಯೋಜನೆಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ಕೈಬಿಟ್ಟಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ (2026-27ರಿಂದ 2030-31) ಒಟ್ಟು 53,428 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಈ ಕಾರ್ಯಕ್ರಮವನ್ನು ಮುಂದುವರಿಸಲು ಸಂಪುಟ ಅನುಮೋದನೆ ನೀಡಲಾಗಿದೆ.

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಹೆಸರನ್ನು ‘ಪ್ರಧಾನಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ’ ಎಂದು ಬದಲಾಯಿಸಲಾಗಿದೆ. ಇದರ ಅಡಿಯಲ್ಲಿ ಬರುತ್ತಿದ್ದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ‘ಪ್ರಧಾನಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ’ ಎಂದು, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯನ್ನು ‘ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ’ ಎಂದು ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆಯನ್ನು ‘ಪ್ರಧಾನಮಂತ್ರಿ ದಿವ್ಯಾಂಗಜನ್ ಪಿಂಚಣಿ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಕುಟುಂಬ ಸೌಲಭ್ಯ ಯೋಜನೆಯನ್ನು ‘ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ.

ಕೇವಲ ದಿವ್ಯಾಂಗರ ಪಿಂಚಣಿ ಮೊತ್ತ ಹಾಗೂ ನಿಯಮಗಳಲ್ಲಿ ಮಾತ್ರ ಬದಲಾವಣೆ ಮಾಡಿದ್ದು, ವೃದ್ಧಾಪ್ಯ ಮತ್ತು ವಿಧವಾ ಪಿಂಚಣಿ ಮೊತ್ತವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಹೊಸ ನಿಯಮದ ಪ್ರಕಾರ, 0ಯಿಂದ 79 ವರ್ಷದೊಳಗಿನ ದಿವ್ಯಾಂಗ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಮಾಸಿಕ ಪಿಂಚಣಿಯನ್ನು 300 ರೂಪಾಯಿಗಳಿಂದ 375 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ 80 ವರ್ಷ ಮೇಲ್ಪಟ್ಟ ಫಲಾನುಭವಿಗಳ ಪಿಂಚಣಿಯನ್ನು 500 ರೂಪಾಯಿಗಳಿಂದ 625 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ದಿವ್ಯಾಂಗ ಪಿಂಚಣಿ ಪಡೆಯಲು ಈ ಹಿಂದೆ ನಿಗದಿಪಡಿಸಲಾಗಿದ್ದ ಶೇಕಡ 80ರಷ್ಟು ಅಂಗವೈಕಲ್ಯದ ಮಿತಿಯನ್ನು ಇದೀಗ ಶೇಕಡ 40ಕ್ಕೆ ಇಳಿಕೆ ಮಾಡಲಾಗಿದೆ. ಜತೆಗೆ, ಈ ಯೋಜನೆಗೆ ಕನಿಷ್ಠ ವಯಸ್ಸಿನ ಮಿತಿಯನ್ನು ಸಡಿಲಿಸಲಾಗಿದ್ದು, ಇನ್ನು ಮುಂದೆ ಜನನದಿಂದಲೇ ಈ ಸೌಲಭ್ಯ ಪಡೆಯಲು ಅರ್ಹತೆ ಕಲ್ಪಿಸಲಾಗಿದೆ.











































































error: Content is protected !!
Scroll to Top