ಸಾರಿಗೆ ಬಸ್ಸುಗಳ ನಿರ್ವಹಣೆ ಮತ್ತು ಸುರಕ್ಷತೆ ಬಗ್ಗೆ ಪ್ರಶ್ನೆ
ಚಿಕ್ಕಮಗಳೂರು: ಚಲಿಸುತ್ತಿರುವಾಗಲೇ ಸರ್ಕಾರಿ ಬಸ್ಸೊಂದರ ಟಯರ್ ಕಳಚಿ ಬಿದ್ದ ಆಘಾತಕಾರಿ ಘಟನೆ ಕೊಪ್ಪ ತಾಲೂಕಿನ ನಾಗಲಾಪುರ ಬಳಿ ನಡೆದಿದ್ದು, ಪ್ರಯಾಣಿಕರು ಯಾವುದೇ ಪ್ರಾಣಾಪಾಯ ಇಲ್ಲದೇ ಪಾರಾಗಿದ್ದಾರೆ.
ಶಿವಮೊಗ್ಗ ಡಿಪೋಗೆ ಸೇರಿದ ಸರ್ಕಾರಿ ಬಸ್ಸು ಶೃಂಗೇರಿಯಿಂದ ಶಿವಮೊಗ್ಗಕ್ಕೆ ಹೊರಟಿತ್ತು. ದಾರಿ ಮಧ್ಯೆ ಟಯರ್ ಕಳಚಿ ಬಿದ್ದಿದೆ. ಬಸ್ಸಿನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯ ತಪ್ಪಿದೆ. ಚಾಲಕನ ಸಮಯಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದೆ.

ಬಸ್ನಿಂದ ಉರುಳಿದ ಟಯರ್ ನಿಂದ ಮತ್ತೊಂದು ವಾಹನಕ್ಕೂ ಹಾನಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಇಳಿದು ರಸ್ತೆಯಲ್ಲೇ ಕುಳಿತ ದೃಶ್ಯ ಕಂಡು ಬಂತು. ಈ ಘಟನೆ ಸರ್ಕಾರಿ ಬಸ್ಸುಗಳ ನಿರ್ವಹಣೆ, ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.





































