ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ಮಂಗಳೂರಿಗೆ ಇಂದು ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ಉಚ್ಚಿಲ ದಸರಾ, ಕುದ್ರೋಳಿ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಉಡುಪಿ:

ವಿಶ್ವಮಟ್ಟದ ಪ್ರವಾಸೋದ್ಯಮ ಕ್ಷೇತ್ರವಾಗಿ ಕರಾವಳಿಯನ್ನು ಅಭಿವೃದ್ಧಿ ಮಾಡಲಾಗುವುದು. ಕರಾವಳಿ ಮತ್ತು ಮಲೆನಾಡಿಗೆ ಸಂಬಂಧಿಸಿದ ಹಾಗೆ ವಿಶೇಷ ಪ್ರವಾಸೋದ್ಯಮ ನೀತಿ ಜಾರಿಗೆ ತರುವುದಾಗಿ ಸಿ ಎಂ ಹೇಳಿದರು.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಳಿಕ ತುಳು ಭಾಷೆಯಲ್ಲಿ ಶುಭಾಶಯ ಕೋರಿ ಭಾಷಣವನ್ನು ಆರಂಭಿಸಿದರು. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ದೇವಿಯ ಆಶೀರ್ವಾದ ಪಡೆದಿದ್ದೆ. ಈಗ ಮುಖ್ಯಮಂತ್ರಿಯಾಗಿ ಪ್ರಜಾಸೇವಕನಾಗಿ ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಮಹಿಳಾ ಸಬಲೀಕರಣವೇ ಸಮಾಜದ ಪ್ರಗತಿಗೆ ದಾರಿ. ಮಹಾಲಕ್ಷ್ಮಿ ಸಂಪತ್ತಿನ ಸಂಕೇತವಾದರೆ, ಸರಸ್ವತಿ ಜ್ಞಾನದ ಸಂಕೇತ, ಮಹಾಕಾಳಿ ಶಕ್ತಿಯ ಸಂಕೇತ ಎಂದು ಹೇಳಿದರು.
ಮೀನುಗಾರ ಮಹಿಳೆಯರು ಬಡ್ಡಿರಹಿತ ಸಾಲದ ಸೌಲಭ್ಯ ಹಾಗೂ ಬಂದರು ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ಯಾವುದೇ ಘೋಷಣೆ ಮಾಡುವುದಿಲ್ಲ. ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರಾವಳಿಯ ಚಿನ್ನ ಮತ್ತು ಮರದ ಕೆತ್ತನೆ ಕಲೆಯನ್ನು ಉಳಿಸಿ ಉದ್ಯೋಗಾವಕಾಶ ಸೃಷ್ಟಿಸಲು ಕಾರ್ಕಳದಲ್ಲಿ ಪಾರ್ಕ್ ನಿರ್ಮಾಣದ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ. ಯುವಕರ ವಲಸೆ ತಡೆಯುವುದು ಹಾಗೂ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ದಸರಾ ಕೇವಲ ಹಬ್ಬವಲ್ಲ, ಅದು ಆರ್ಥಿಕತೆಯ ಚಕ್ರ. ಜಾತಿ-ಧರ್ಮಗಳ ಭೇದ ಮರೆತು ಮಾನವೀಯತೆಗೆ ಆದ್ಯತೆ ನೀಡಬೇಕು. ರಾಜ್ಯದ ಅಭಿವೃದ್ಧಿಗೆ ಜನರ ಆಶೀರ್ವಾದ ಮತ್ತು ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ನುಡಿದರು.
ಮಂಗಳೂರು:

ಉಚ್ಚಿಲ ದಸರಾದಲ್ಲಿ ಭಾಗವಹಿಸಿ ಬಳಿಕ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ದಸರಾ ಕಾರ್ಯಕ್ರಮದಲ್ಲಿ ಸಿ ಎಂ ಭಾಗವಹಿಸಿದರು.
ಮಂಗಳೂರಿನ ದಸರಾ ಭಕ್ತವೈಭವದ ಪ್ರತೀಕ. ದಸರಾ ಕೇವಲ ಆಚರಣೆಯಲ್ಲ; ಅದು ನಮ್ಮ ಪರಂಪರೆಯ ಹೆಮ್ಮೆ, ಆರ್ಥಿಕ ಚಟುವಟಿಕೆಗಳ ಚೈತನ್ಯ ಮತ್ತು ಸಮಾಜದ ಒಗ್ಗಟ್ಟಿನ ಸಂಕೇತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕರಾವಳಿಯ ಭಾಗದ ಸಂಸ್ಕೃತಿ, ಧಾರ್ಮಿಕ ಪರಂಪರೆ, ಪ್ರಕೃತಿ ಮತ್ತು ಜನರ ಭಾವನೆಗಳನ್ನು ಗೌರವಿಸಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ನನ್ನದು ರಾಜಕೀಯಪ್ರೇರಿತ ಚಿಂತನೆಯಲ್ಲ. ಜನರ ಬದುಕಿನ ಚಿಂತನೆ. ಕರಾವಳಿ ಜನರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಕರಾವಳಿಯ ಹಿರಿಯರು ಈ ಪ್ರದೇಶಕ್ಕೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಲ್ಲಿನ ದೈವಿಕ ಪರಂಪರೆ, ಪ್ರಕೃತಿ ಸಂಪತ್ತು ಮತ್ತು ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಕರಾವಳಿಯ ಜನರ ಸಂಸ್ಕಾರ, ಜ್ಞಾನ ಮತ್ತು ಶಿಸ್ತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅವರೊಂದಿಗೆ ಹೆಜ್ಜೆ ಹಾಕಲು ಬಂದಿದ್ದೇನೆ ಎಂದು ತಿಳಿಸಿದರು.
ಕರಾವಳಿಯ ಹೊರತಾಗಿ ಕರ್ನಾಟಕ ಅಪೂರ್ಣ. ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಕರಾವಳಿ ಸಂಸ್ಕೃತಿ ಮತ್ತು ಪರಂಪರೆಯ ವಿಶ್ವವಿದ್ಯಾಲಯದಂತೆ ಎಂದರು. ತುಳುನಾಡಿನ ಸ್ನೇಹಿತರು, ಶಾಸಕರು ಪಕ್ಷಭೇದ ಮರೆತು ಬಂದು ತಮ್ಮ ಭಾಷೆಗೆ ಗೌರವ ನೀಡುವಂತೆ ಮನವಿ ಮಾಡಿದ್ದರು. ಇದು ಕೇವಲ ಭಾಷೆಯ ವಿಚಾರವಲ್ಲ, ಜನರ ಭಾವನೆ, ಬದುಕು, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿಷಯ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದು ಸಚಿವ ಸಂಪುಟ ಸಭೆ ನಡೆಸಿ ತುಳು ಭಾಷೆಗೆ ಗೌರವ ನೀಡುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ. ಇದರಿಂದ ನನಗೆ ಅಪಾರ ಸಂತೋಷವಾಗಿದೆ. ತಾಯಿಯಿಂದ ಕಲಿತ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಭಾಷೆಯ ಗೌರವ ಕಾಪಾಡುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಹೇಳಿದರು.
ಮಂಗಳೂರು ದಸರಾ ಸಂಭ್ರಮ, ಸೌಹಾರ್ದತೆ, ಸಂಸ್ಕೃತಿ ಮತ್ತು ಮಾನವೀಯತೆಯ ಸಂಗಮವಾಗಿದೆ. ದೇವಸ್ಥಾನಗಳಲ್ಲಿ ಪಕ್ಷಭೇದಗಳಿಗೆ ಅವಕಾಶವಿಲ್ಲ. ಎಲ್ಲರೂ ಒಂದಾಗಿ ಸೇರುವ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತವೆ. ಪರಂಪರೆಯ ಜತೆಗೆ ಪ್ರಗತಿಯನ್ನೂ ಸಾಧಿಸಬೇಕು. ಮೈಸೂರಿನ ದಸರಾದಲ್ಲಿಯೂ ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಗಳಿಗೆ ಅವಕಾಶ ನೀಡಲಾಗುತ್ತಿದೆ. ಕಂಬಳ ಸೇರಿದಂತೆ ಕರಾವಳಿಯ ವಿವಿಧ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಸೂರಿನಲ್ಲಿ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಕೇವಲ ದಸರಾ ಉದ್ಘಾಟನೆಗಾಗಿ ಕುದ್ರೋಳಿಗೆ ಬಂದಿಲ್ಲ. ಭಕ್ತನಾಗಿಯೂ ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಉಡುಪಿಯಲ್ಲಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದ ಬಳಿಕ ಇಲ್ಲಿ ಗೋಕರ್ಣನಾಥ ಸ್ವಾಮಿ, ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ನಾರಾಯಣ ಗುರುಗಳ ಆಶೀರ್ವಾದ ಕೋರಿದ್ದಾಗಿ ಅವರು ಹೇಳಿದರು. ನಾನೂ ಇಂದು ನಿಮ್ಮ ನಡುವೆ ಭಕ್ತನಾಗಿ ಬಂದಿದ್ದೇನೆ ಎಂದು ತಿಳಿಸಿದರು.
ಕುದ್ರೋಳಿಯಿಂದ ಮೂರು ಬೇಡಿಕೆ:
ಕುದ್ರೋಳಿ ಕ್ಷೇತ್ರದ ವತಿಯಿಂದ ಮುಖ್ಯಮಂತ್ರಿ ಅವರಿಗೆ ಮೂರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಯಿತು. ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ 15 ಎಕರೆ ಜಮೀನು ಮಂಜೂರು ಮಾಡಬೇಕು, ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯ ಬಜೆಟ್ನಲ್ಲಿ ಶಾಶ್ವತ ಅನುದಾನ ಮೀಸಲಿಡಬೇಕು ಹಾಗೂ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಅಧಿಕೃತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಕ್ಷೇತ್ರದವರು ನೀಡಿರುವ ಬೇಡಿಕೆಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ. ಬದುಕಿನಲ್ಲಿ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂಬುದೇ ನನ್ನ ಆಶಯ. ನನ್ನ ಮೇಲೆ ವಿಶ್ವಾಸವಿರಲಿ. ನಿಮ್ಮ ಚಿಂತನೆ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
ಜನಾರ್ದನ ಪೂಜಾರಿ ಬಗ್ಗೆ ಅಭಿಮಾನದ ಮಾತು
1985ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೆ. ಬಳಿಕ ಜನಾರ್ದನ ಪೂಜಾರಿ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಕನಕಪುರದಲ್ಲಿ ಸಾಲಮೇಳ ನಡೆಸಿ ಬಡವರಿಗೆ ಸಾಲ ನೀಡಿದ್ದರು. ಅಂದು ಸುಮಾರು 5,000 ರೂ. ಸಾಲವೂ ದೊಡ್ಡ ಮೊತ್ತವಾಗಿತ್ತು. ನನ್ನ ಕ್ಷೇತ್ರದಲ್ಲಿ ಏಳರಿಂದ ಎಂಟು ಸಾವಿರ ಜನರಿಗೆ ನೆರವು ದೊರೆತಿತ್ತು. ಆ ನೆರವು ನನ್ನ ಮುಂದಿನ ರಾಜಕೀಯ ಬದುಕಿಗೆ ದೊಡ್ಡ ಶಕ್ತಿ ನೀಡಿತು. ಬಳಿಕ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸಕನಾಗಿ, ಸಚಿವನಾಗಿ ಬೆಳೆದು ಇಂದು ಈ ಸ್ಥಾನಕ್ಕೆ ಬರಲು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದವೂ ಕಾರಣ. ನಾರಾಯಣ ಗುರುಗಳ ಸಂದೇಶ ಹಾಗೂ ಜನಾರ್ದನ ಪೂಜಾರಿ ಅವರ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಯುವಜನರಿಗೆ ಅವಕಾಶ ಕಲ್ಪಿಸುವುದು ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಬೆಳೆಸುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





































