ಮಂಗಳೂರು: ಖ್ಯಾತ ಯಕ್ಷಗಾನ ಪಾತ್ರಧಾರಿ ಥಂಡಿಮನೆ ಶ್ರೀಪಾದ ಭಟ್ (62) ಅವರು ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕೆಲ ಸಮಯದಿಂದ ಅವರು ತೀವ್ರವಾದ ಕಾಲು ನೋವು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಶ್ರೀಪಾದ್ ಭಟ್ ಅವರು ಚೇತರಿಸಿಕೊಂಡು ಮತ್ತೆ ಯಕ್ಷರಂಗಕ್ಕೆ ಮರಳುವ ಮಹದಾಸೆ ಹೊಂದಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಸೇರಿದಂತೆ ಬಯಲಾಟ ಮೇಳಗಳಲ್ಲಿಯೂ ವೇಷಧಾರಿಯಾಗಿ ಹಂತ ಹಂತವಾಗಿ ಬೆಳದು ಬಂದ ಶ್ರೀಪಾದ ಭಟ್ ಅವರು ಗತ್ತು ಗಾಂಭೀರ್ಯದ ಮೂಲಕ ನಾಯಕ ಮತ್ತು ಖಳ ನಾಯಕ ಎರಡೂ ಪಾತ್ರಗಳಲ್ಲಿ ಸೈ ಎನಿಸಿಕೊಂಡು ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಯಕ್ಷಗಾನ ಭಾಷೆಯಲ್ಲಿ ಸಮರ್ಥ ಎರಡನೇ ವೇಷಧಾರಿಯಾಗಿದ್ದರು. ಅವರ ಅಗಲಿಕೆ ಯಕ್ಷರಂಗಕ್ಕೆ ತುಂಬಲಾರದ ನಷ್ಟ.

ಮೃತರು ತಂದೆ, ತಾಯಿ, ಪತ್ನಿ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶಿರಸಿ ಸಮೀಪದ ಸಾಲ್ಕಣಿಯ ಥಂಡಿಮನೆಯಲ್ಲಿ ನಡೆಸುವುದಾಗಿ ಕುಟುಂಬ ವರ್ಗ ಹೇಳಿದೆ.




























































