2028 ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದ ಭಟ್
ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿರುವುದು ನಿಜ. ಆದರೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಆಹ್ವಾನ ನೀಡಿದೆ. ಆದರೆ ಆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಬೆಂಬಲಿಗರ ಜೊತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ನನಗೆ ಬಿಜೆಪಿಯಿಂದಲೂ ಆಹ್ವಾನ ಬರುವ ನಿರೀಕ್ಷೆ ಇದೆ. ಹಾಗಾದಲ್ಲಿ ಅದರ ಬಗ್ಗೆಯೂ ಯೋಚಿಸುತ್ತೇನೆ. ನಾನು ಎಳವೆಯಿಂದಲೇ RSS ಕಾರ್ಯಕರ್ತನಾಗಿ ಬೆಳೆದಿದ್ದೇನೆ. ಬಿಜೆಪಿಯಲ್ಲಿ ಯುವ ಮೋರ್ಚಾದ ಜಿಲ್ಲಾ ಘಟಕ ಹಾಗೂ ಪಕ್ಷದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಮೂರು ಬಾರಿ ಶಾಸಕನಾಗಿಯೂ ಆಯ್ಕೆಯಾಗಿದ್ದೇನೆ. ಇಂತಹ ಹಿನ್ನೆಲೆಯಿರುವಾಗ ಪಕ್ಷ ಬದಲಿಸುವ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ ಮನಸ್ಸಿಗೂ ಅದು ಒಪ್ಪುವುದಿಲ್ಲ. ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಟಿಕೆಟ್ ಕೈತಪ್ಪಿದ ಕಾರಣಕ್ಕೆ ನೋವಿದೆ. ವಂಚನೆಗೆ ಒಳಗಾದ ಭಾವನೆ ಇದೆ. ತಮ್ಮದೇ ಪಕ್ಷದ ಕೆಲವರಿಂದ ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಪಕ್ಷದ ಹಿರಿಯರು ಆ ಸಂದರ್ಭದಲ್ಲಿ ತಮ್ಮ ಜೊತೆ ಮಾತನಾಡದೇ ಇರುವುದು ನೋವುಂಟು ಮಾಡಿದೆ ಎಂದಿದ್ದಾರೆ. ವಿಶೇಷ ಗೌರವ ನೀಡದೇ ಇದ್ದರೂ ಕೆೊನೇ ಪಕ್ಷ ಮಾತನಾಡಿಸಿದ್ದರೆ ಬೇಸರ ಇರುತ್ತಿರಲಿಲ್ಲ ಎಂದು ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ತಮಗೆ ಈ ಹಿಂದಿನ ಚುನಾವಣೆಯಲ್ಲಿ ಪಕ್ಷದಿಂದಲೇ ಟಿಕೆಟ್ ಸಿಕ್ಕಿಲ್ಲ ಎಂದು ಜನರಿಗೆ ತಿಳಿದಿದೆ. ಅವರೇ ನನ್ನನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರು ರಾಜಕೀಯದಿಂದ ದೂರ ಇರಿ ಎಂದರೆ ಅದನ್ನೂ ಮಾಡುತ್ತೇನೆ. ಜನ ಸೇವೆಗೆ ಜನಪ್ರತಿನಿಧಿಯೇ ಆಗಬೇಕೆಂದೇನಿಲ್ಲ. ಬೇರೆ ಮಾರ್ಗಗಳೂ ಇವೆ ಎಂದು ಹೇಳಿದ್ದಾರೆ.





































