ನವದೆಹಲಿ: ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಸೇರಿಕೊಂಡು ನವದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯ ವಿರುದ್ಧ ರಕ್ಷಣಾ ಸಚಿವ ರಾಜನಾಥ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ದೇಶದ ಯುವಶಕ್ತಿಯನ್ನು ಅಭಿವೃದ್ಧಿಗೆ ಬಳಸುವ ಬದಲು ಅರಾಜಕತೆ ಸೃಷ್ಟಿ ಮಾಡಲು ಬಳಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಸರ್ಕಾರ ಪತನದ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆಗೆ ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂಬುದು ಅವರ ಆರೋಪ.
ಪ್ರಜಾಪ್ರಭುತ್ವದ ಹೆಸರಿನಲ್ಲಿ ಗೊಂದಲ ಸೃಷ್ಟಿಸಲು ಅಥವಾ ಸಂವಿಧಾನಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರಲು ಯಾರಿಗೂ ಅವಕಾಶವಿಲ್ಲ. ಕಾಂಗ್ರೆಸ್ ಹಾಗೂ ಅದರ ರಾಜಕೀಯ ಮಿತ್ರಪಕ್ಷಗಳು ಯುವಕರನ್ನು ರಾಜಕೀಯ ಸಂಘರ್ಷಕ್ಕೆ ಬಳಸಿಕೊಳ್ಳುತ್ತಿವೆ. ದೇಶ ನಿರ್ಮಾಣದಲ್ಲಿ ತೊಡಗಬೇಕಾದ ಯುವಜನರನ್ನು ಅರಾಜಕತೆಯ ರಾಜಕಾರಣಕ್ಕೆ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕರು ಬಾಂಗ್ಲಾದೇಶದ ಘಟನೆಗಳಿಂದ ಪ್ರೇರಿತರಾಗಿದ್ದಾರೆ. ರಾಜಕೀಯ ಸ್ವಾರ್ಥಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಯೇ ವಿನಃ ಚುನಾವಣಾ ಸುಧಾರಣೆಗಳಿಗಾಗಿ ಅಲ್ಲ ಎಂದಿದ್ದಾರೆ. ಕಾನೂನಿಗೆ ಗೌರವ ನೀಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರಜಾಪ್ರಭುತ್ವದ ಪ್ರಮುಖ ಅಂಶಗಳು. ಆಕ್ರೋಶ, ಸುಳ್ಳು ಪ್ರಚಾರಗಳಿಂದ ದೇಶದ ಅಭಿವೃದ್ಧಿ ತಡೆಯುವುದು ಅಸಾಧ್ಯ ಎಂದು ಅವರು ನುಡಿದಿದ್ದಾರೆ.



























































