ಬಾರದ ಮಳೆ: ಗಗನಕ್ಕೇರಿತು ಅಕ್ಕಿಯ ಬೆಲೆ

ಆಹಾರ ವಸ್ತುಗಳ ಮೇಲೆಯೂ ಬರದ ಬರೆ

ಬೆಂಗಳೂರು: ಮಳೆಯ ಅಭಾವದಿಂದ ರಾಜ್ಯದಲ್ಲೂ ಬರಗಾಲದ ಸ್ಥಿತಿ ಇದ್ದು ತಿನ್ನುವ ಅನ್ನದ ಮೇಲೆಯೂ ಇದರ ಪರಿಣಾಮ ದಟ್ಟವಾಗಿದೆ.

ವಾರದಿಂದ ವಾರಕ್ಕೆ ಅಕ್ಕಿಯ ಬೆಲೆ ಗಗನಮುಖಿಯಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಭತ್ತದ ಪ್ರಮಾಣ ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿದೆ.

ಸಾಮಾನ್ಯ ಗುಣಮಟ್ಟದ ಸೋನಾಮಸೂರಿ ಅಕ್ಕಿಯ ದರ ಕಳೆದ ತಿಂಗಳು 25 ಕೆಜಿ ಪ್ಯಾಕೆಟ್‌ಗೆ 1500-1600 ರೂ. ಇತ್ತು. ಅ.1ರಿಂದ 300-400 ರೂ. ಏರಿಕೆಯಾಗಿದೆ. ಈಗ 25 ಕೆಜಿ ಅಕ್ಕಿ ಪ್ಯಾಕೇಟ್ ಸರಾಸರಿ 2000 ರೂ.ಗೆ ಏರಿದ್ದು ಕ್ವಿಂಟಲ್‌ಗೆ 2000 ರೂ.ಗಳಿಂದ 2500 ರೂ.ಗೆ ದರ ಏರಿಕೆ ಕಂಡಿದೆ. ಸೋನಾ ಮಸೂರಿ ಕೆಜಿಗೆ 75-80 ರೂ. ಆಗಿದ್ದರೆ, ಜೀರಾ, ಕೋಲಂ, ಬಾಸುಮತಿ, ರಾಜಮುಡಿ ಅಕ್ಕಿ ದರವಂತೂ ಕೆಜಿಗೆ ಸರಾಸರಿ 120-150 ರೂ. ಮೀರಿದೆ. ಕಳೆದ ವರ್ಷ ಈ ವೇಳೆಗೆ 1 ಕ್ವಿಂಟಲ್ ಭತ್ತಕ್ಕೆ 2200 ರೂ.ಗಳಿಂದ 2400 ರೂ. ದರ ಇತ್ತು. ಈ ಬಾರಿ ಮಳೆ ಇಲ್ಲದೇ ಭತ್ತದ ಬೆಳೆಯೂ ಇಲ್ಲದೇ ಇರುವುದರಿಂದ ದರವೂ ದುಪ್ಪಟ್ಟಾಗಿದೆ. ಸೋನಾ ಮಸೂರಿ ದರ 6,000 ರೂ.ಗಳಿಂದ 8000 ರೂ., ಆರ್‌ಎನ್‌ಆ‌ರ್ ಮತ್ತು ಸ್ಟೀಮ್ ರೈಸ್ 6,500 ರೂ.ಗಳಿಂದ 8,500 ರೂ.ಗಳಿಗೆ ಹಾಗೂ ಕೋಲಂ ರೈಸ್‌ 7,500 ರೂ.ಗಳಿಂದ 10,000 ರೂ.ಗೆ ಏರಿಕೆಯಾಗಿದೆ.

ಅಕ್ಕಿ ಮತ್ತು ಇನ್ನಿತರ ಆಹಾರ ವಸ್ತುಗಳ ಬೆಲೆ ಏರಿಕೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳದಿರುವುದೇ ಮುಖ್ಯ ಕಾರಣವಾಗಿದೆ. ಹೀಗೆಯೇ ಮುಂದುವರಿದಲ್ಲಿ ದಿನ ಬಳಕೆಯ ಆಹಾರ ಸಾಮಗ್ರಿ ಖರೀದಿಗೂ ಬಡ, ಮಧ್ಯಮ ವರ್ಗದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎನ್ನುವುದರಲ್ಲಿ ಯಾವದೇ ಸಂಶಯವಿಲ್ಲ.











































































error: Content is protected !!
Scroll to Top