ಉಗ್ರರಿಗೆ ಬೆಂಬಲ ನೀಡುವ ಪಾಕ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ
ನವದೆಹಲಿ: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಭಾರತದ ವಿರುದ್ಧ ಮಾಡಿರುವ ಆರೋಪಗಳಿಗೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ.
ಭಾರತದ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗಹ್ಲೋಟ್ ಅವರು, ಗಡಿಯಾಚೆಗೆ ನಡೆಯುವ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ತೀವ್ರವಾಗಿ ಖಂಡಿಸಿದೆ. ಉಗ್ರವಾದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ವಿಶ್ವಸಂಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಮಾಡಿದ ಪ್ರಸ್ತಾಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದರಲ್ಲಿ ಯಾವ ಚರ್ಚೆಗೂ ಅವಕಾಶವಿಲ್ಲ. ಪಾಕಿಸ್ತಾನದ ಪ್ರತಿನಿಧಿಗಳು ವರ್ಷದಿಂದ ವರ್ಷಕ್ಕೆ ಒಂದೇ ಸುಳ್ಳನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ, ಸುಳ್ಳನ್ನು ಎಷ್ಟೇ ಸಲ ಹೇಳಿದರೂ ಅದು ಸತ್ಯವಾಗುವುದಿಲ್ಲ ಎಂದು ಗಹ್ಲೋಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕ್ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಮತ್ತೆ ಹೇಳಿದೆ. ಜಾಗತಿಕ ಉಗ್ರಗಾಮಿ ಒಸಾಮಾ ಬಿನ್ ಲಾಡೆನ್, ಪಾಕಿಸ್ತಾನದ ಸೇನಾ ನೆಲೆಯ ಸಮೀಪವೇ ವರ್ಷಗಳ ಕಾಲ ಆಶ್ರಯ ಪಡೆದಿದ್ದು, ಇದು ಪಾಕಿಸ್ತಾನದ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ. ಭಯೋತ್ಪಾದಕರು ತಪ್ಪಿಸಿಕೊಳ್ಳಲು ಈಗ ಜಗತ್ತಿನಲ್ಲಿ ಎಲ್ಲಿಯೂ ಸುರಕ್ಷಿತ ಸ್ಥಳವಿಲ್ಲ. ಭಾರತವು ತನ್ನ ರಕ್ಷಣೆಗೆ ಎಂದಿಗೂ ಬದ್ಧವಾಗಿದ್ದು, ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೆ ಅದು ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಧೋರಣೆಯನ್ನು ಭಾರತ ತೀವ್ರವಾಗಿ ಪ್ರಶ್ನೆ ಮಾಡಿದೆ. ಪಾಕಿಸ್ತಾನದ 27ನೇ ಸಂವಿಧಾನ ತಿದ್ದುಪಡಿ ಹಾಗೂ ಅಲ್ಲಿನ ನಿಜವಾದ ಆಡಳಿತಗಾರನಿಗೆ ನೀಡಲಾಗಿರುವ ಜೀವಾವಧಿ ವಿನಾಯಿತಿಯ ಬಗ್ಗೆಯೂ ಗಹ್ಲೋಟ್ ಟೀಕಿಸಿದ್ದಾರೆ.
ಪಾಕಿಸ್ತಾನ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಭಾರತದ ವಿರುದ್ಧ ಟೀಕೆ ಮಾಡುವ ಮೊದಲು, ತನ್ನ ದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ನೋಡಿಕೊಳ್ಳಬೇಕು ಸೂಚಿಸಿದ್ದಾರೆ.
ಪಾಕಿಸ್ತಾನದ ಟೀಕೆಗಳು ಸಂಪೂರ್ಣವಾಗಿ ಅಸಂಬದ್ಧ ಮತ್ತು ಕಪಟತನದಿಂದ ಕೂಡಿವೆ ಎಂದು ಭಾರತ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ಹರಡುವಲ್ಲಿ ಪಾಕಿಸ್ತಾನದ ಪಾತ್ರ ಪ್ರಮುಖವಾಗಿದೆ. ಆ ದೇಶದ ಭಯೋತ್ಪಾದನೆ, ವಂಚನೆ ಮತ್ತು ದ್ವಂದ್ವ ನೀತಿಗಳು ಜಗತ್ತಿಗಾಗಲಿ ಅಥವಾ ಸ್ವತಃ ಪಾಕಿಸ್ತಾನದ ಪ್ರಜೆಗಳಿಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.







































