ಕಾರ್ಕಳ : ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ, ಎನ್ಐಟಿಕೆ ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ ಡಾ. ಎನ್.ಆರ್. ಶೆಟ್ಟಿ (90) ನ. 12ರಂದು ನಿಧನ ಹೊಂದಿದರು. ಮೂಲತಃ ನಿಟ್ಟೆ ಗ್ರಾಮದ ಕುಂಟಲ್ಪಾಡಿ ನಿವಾಸಿಯಾಗಿದ್ದ ಡಾ. ಎನ್.ಆರ್. ಶೆಟ್ಟಿ ಅವರು ಗುರುವಾರ ಮುಂಜಾನೆ ಕೊನೆಯುಸಿರೆಳೆದರು.
ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪದವಿ ಪಡೆದು ಇಂಗ್ಲೆಂಡ್ನ ಎಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಆಪ್ಟೋ-ಎಲೆಕ್ಟ್ರಾನಿಕ್ಸ್) ಮತ್ತು ಮುಂಬೈ ಐಐಟಿ (IIT Bombay) ಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿ ಪಡೆದಿದ್ದರು.
ಸುರತ್ಕಲ್ NITK ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಎರಡು ಅವಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (IGNCA) ಸದಸ್ಯ ಕಾರ್ಯದರ್ಶಿಯಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಕಲ್ಬುರ್ಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿಯೂ ಸೇವೆ ಸಲ್ಲಿಸಿದ್ದರು.
ನಿಟ್ಟೆ ಸಮೂಹ ಸಂಸ್ಥೆಗಳ ಸಂಸ್ಥಾಪಕ ಎನ್. ವಿನಯ ಹೆಗ್ಡೆ ಅವರ ಪತ್ನಿಯ ಅಕ್ಕ ವತ್ಸಲಾ ಆರ್. ಶೆಟ್ಟಿ ಅವರನ್ನು ವರಿಸಿದ್ದ ಎನ್. ಆರ್. ಶೆಟ್ಟಿ ಅವರು ಬೆಂಗಳೂರು ಯಲಹಂಕದಲ್ಲಿರುವ ನಿಟ್ಟೆ ಕಾಲೇಜಿನ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಿಟ್ಟೆ ಕಾಲೇಜು ನಿರ್ದೇಶಕರಾಗಿ ಅತ್ಯುತ್ತಮ ರೀತಿಯಲ್ಲಿ ಸಂಸ್ಥೆ ಮುನ್ನಡೆಸಿದ್ದರು. ನಿವೃತ್ತಿ ಬಳಿಕ ಕುಂಟಲ್ಪಾಡಿಯಲ್ಲಿ ನೆಲೆಸಿದ್ದ ಅವರು ಶೈಕ್ಷಣಿಕ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದವರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.
ಇಂದು (ಗುರುವಾರ) ಸಂಜೆ 3 ಗಂಟೆಗೆ ಮೃತರ ಅಂತ್ಯಸಂಸ್ಕಾರ ಕುಂಟಲ್ಪಾಡಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.




























































