ಜೈಲಿನ ವಾರ್ಡನ್‌ಗೆ ಕೊಲೆ ಬೆದರಿಕೆ ಒಡ್ಡಿದ್ದ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ, 40 ಸಾವಿರ ರೂ. ದಂಡ

ಉಡುಪಿ: ಜೈಲಿನ ವಾರ್ಡನ್‌ಗೆ ‌ಕೊಲೆ ಬೆದರಿಕೆ ಹಾಕಿದ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹಿರಿಯಡ್ಕ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ 2011 ರಲ್ಲಿ ಡಿ. 3 ರಂದು ವಿಚಾರಣಾ ಬಂಧಿಯಾಗಿದ್ದ ಸಫಾನ್ ಹುಸೇನ್ ಅಲಿಯಾಸ್‌ ರಜಾಕ್, ಕರ್ತವ್ಯದಲ್ಲಿದ್ದ ಜೈಲು ವಾರ್ಡನ್‌ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಎಡ ಕೆನ್ನೆಗೆ ಹೊಡೆದಿದ್ದ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಪೂರ್ಣಗೊಳಿಸಿ 2012ರ ಜ.10ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ 2022ರ ಜೂ.24ರಂದು ಪ್ರಕರಣವನ್ನು ಎಲ್‌ಪಿಸಿ ಪ್ರಕರಣವಾಗಿ ದಾಖಲಿಸಲಾಗಿತ್ತು. 2026ರ ಏ.23ರಂದು ಆರೋಪಿಯನ್ನು ಬಾಡಿ ವಾರಂಟ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಸ್‌ಸಿ ನಂ.21/2026ರಂತೆ ವಿಚಾರಣೆ ನಡೆಯಿತು. ಸೆ.28ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯವು ಸಫಾನ್‌ ಹುಸೇನ್‌ಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ₹40,000 ದಂಡ ವಿಧಿಸಿದೆ ಆದೇಶ ಹೊರಡಿಸಿದೆ.











































error: Content is protected !!
Scroll to Top