ಹೆಬ್ರಿ: ಪಿ.ಆರ್.ಎನ್. ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಪಿಯುಸಿ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಭವಿಷ್ಯದ ವೃತ್ತಿ ಗುರಿಗಳಿಗೆ ಅನುಗುಣವಾಗಿ ಸೂಕ್ತವಾದ ಪದವಿ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅಗತ್ಯವಾದ ಮಾಹಿತಿ ಮತ್ತು ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ನಿಟ್ಟೆ ವಿಶ್ವವಿದ್ಯಾಲಯದ ಮನೋರಂಜನಿ ಶೆಟ್ಟಿ ಮಾತನಾಡಿ, ಪಿಯುಸಿ ನಂತರ ಪದವಿ ಹಂತದಲ್ಲಿ ಲಭ್ಯವಿರುವ ವಿವಿಧ ಕೋರ್ಸ್ಗಳು, ಅವುಗಳ ವೈಶಿಷ್ಟ್ಯಗಳು, ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿರುವ ವೃತ್ತಿ ಅವಕಾಶಗಳ ಕುರಿತು ಅವರು ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಇಂದಿನ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಕೇವಲ ಸಾಂಪ್ರದಾಯಿಕ ಕೋರ್ಸ್ಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಹೊಸ ಹಾಗೂ ವೃತ್ತಿಪರ ಕೋರ್ಸ್ಗಳತ್ತಲೂ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸಹಾಯಕ ನಿರ್ದೇಶಕ ಕರ್ತವ್ಯ ವಿವೇಕ್ ರಂಜನ್ ಭಂಡಾರಿ ಅವರು ವೃತ್ತಿ ಮಾರ್ಗದರ್ಶನ ನೀಡಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಿಯುಸಿ ನಂತರ ಆಯ್ಕೆ ಮಾಡಬಹುದಾದ ವಿವಿಧ ಪದವಿ ಹಾಗೂ ವೃತ್ತಿಪರ ಕೋರ್ಸ್ಗಳು, ಉನ್ನತ ಶಿಕ್ಷಣದ ಅವಕಾಶಗಳು ಮತ್ತು ವಿವಿಧ ವೃತ್ತಿ ಕ್ಷೇತ್ರಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಆರಂಭದಲ್ಲಿಯೇ ಸ್ಪಷ್ಟಪಡಿಸಿಕೊಂಡು, ಅದಕ್ಕೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು. ಶೈಕ್ಷಣಿಕ ಜ್ಞಾನದ ಜೊತೆಗೆ ಕೌಶಲ್ಯ, ಸೃಜನಶೀಲತೆ, ಸಂವಹನ ಸಾಮರ್ಥ್ಯ ಹಾಗೂ ನಿರಂತರ ಕಲಿಕೆಯ ಮನೋಭಾವವೂ ಯಶಸ್ಸಿಗೆ ಪ್ರಮುಖವಾಗಿವೆ ಎಂದು ಅವರು ಹೇಳಿದರು.ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವರಲ್ಲಿದ್ದ ವೃತ್ತಿ ಆಯ್ಕೆಯ ಗೊಂದಲಗಳಿಗೆ ಸ್ಪಷ್ಟತೆ ನೀಡಲಾಯಿತು.
ಪ್ರಾಂಶುಪಾಲ ಪ್ರಕಾಶ್ ಜೋಗಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಪಿಯುಸಿ ಹಂತವು ಅತ್ಯಂತ ನಿರ್ಣಾಯಕ ಘಟ್ಟವಾಗಿದ್ದು, ಈ ಹಂತದಲ್ಲಿಯೇ ಮುಂದಿನ ಶಿಕ್ಷಣ ಹಾಗೂ ವೃತ್ತಿ ಜೀವನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. “ಸರಿಯಾದ ಸಮಯದಲ್ಲಿ ದೊರೆಯುವ ಸರಿಯಾದ ಮಾರ್ಗದರ್ಶನವು ವಿದ್ಯಾರ್ಥಿಯ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡಬಲ್ಲದು” ಎಂದು ಅವರು ತಿಳಿಸಿದರು.
ಸಂಖ್ಯಾಶಾಸ್ತ್ರ ಉಪನ್ಯಾಕ ಚಂದ್ರಹಾಸ ಸ್ವಾಗತಿಸಿ, ನಿರೂಪಿಸಿದರು.

























