ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ‘ತ್ರಯಾ ಓ3 ಓಝೋನ್ ಥೆರಪಿ’ ಘಟಕ ಆರಂಭ

ಮೂಡುಬಿದಿರೆ: ಮಿಜಾರಿನ ಶೋಭಾವನ ಆವರಣದಲ್ಲಿರುವ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ‘ತ್ರಯಾ ಓ3 ಓಝೋನ್ ಥೆರಪಿ’ ನೂತನ ಘಟಕವನ್ನು ಬುಧವಾರ ಉದ್ಘಾಟಿಸಲಾಯಿತು. ಇದರೊಂದಿಗೆ ಆರೋಗ್ಯಧಾಮದ ಸಮಗ್ರ ಆರೋಗ್ಯ ಹಾಗೂ ಪ್ರಕೃತಿ ಚಿಕಿತ್ಸಾ ಸೇವೆಗಳ ವ್ಯಾಪ್ತಿಗೆ ಮತ್ತೊಂದು ಚಿಕಿತ್ಸಾ ವಿಧಾನ ಸೇರ್ಪಡೆಯಾಗಿದೆ.

ನೂತನ ಘಟಕದಲ್ಲಿ ರೋಗಿಯ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಓಝೋನೇಟೆಡ್ ನೀರು, ಓಝೋನ್ ಬ್ಯಾಗಿಂಗ್, ಸ್ಕಾಲ್ಪ್ ಬ್ಯಾಗಿಂಗ್, ಸಂಪೂರ್ಣ ದೇಹ ಬ್ಯಾಗಿಂಗ್, ಓಝೋನ್ ಫನಲಿಂಗ್, ಓಝೋನ್ ಎನಿಮಾ, ಕಿವಿ ಮತ್ತು ರೆಕ್ಟಲ್ ಇನ್‌ಸಫ್ಲೇಷನ್, ಯೋನಿ ಇನ್‌ಸಫ್ಲೇಷನ್, ಇಂಟ್ರಾ-ಆರ್ಟಿಕ್ಯುಲರ್ ಓಝೋನ್ ಇಂಜೆಕ್ಷನ್, ಅಬ್ಡೊಮಿನಲ್ ಓಝೋನ್ ಥೆರಪಿ ಹಾಗೂ ಒಟಿಒ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳನ್ನು ಒದಗಿಸಲಾಗುತ್ತದೆ.

ಆಳ್ವಾ ಫಾರ್ಮಾಸಿಯ ಆಡಳಿತಾಧಿಕಾರಿ ಹಾಗೂ ಆಳ್ವಾಸ್ ಅನಂದಮಯದ ತಜ್ಞವೈದ್ಯೆ ಡಾ. ಗ್ರೀಷ್ಮಾ ವಿವೇಕ್ ಆಳ್ವ ಮಾತನಾಡಿ, ಪ್ರಕೃತಿ ಚಿಕಿತ್ಸೆ, ಯೋಗ, ಪೌಷ್ಟಿಕತೆ ಮತ್ತು ಜೀವನಶೈಲಿ ಆಧಾರಿತ ಆರೋಗ್ಯ ಕ್ರಮಗಳೊಂದಿಗೆ ಓಝೋನ್ ಥೆರಪಿಯನ್ನು ಪೂರಕವಾಗಿ ಸಂಯೋಜಿಸುವ ಮೂಲಕ ರೋಗಿ ಕೇಂದ್ರಿತ ಸಮಗ್ರ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಆಳ್ವಾಸ್ ಆನಂದಮಯ ಆರೋಗ್ಯಧಾಮ ಹೊಂದಿದೆ ಎಂದರು.

ಈ ಥೆರಪಿಯಲ್ಲಿ ವಿಶೇಷ ಯಂತ್ರದ ಮೂಲಕ ತಯಾರಿಸಿದ ಓಝೋನ್‌ನ್ನು ದೇಹದ ಅಗತ್ಯವಿರುವ ಭಾಗಕ್ಕೆ ಅಥವಾ ನಿರ್ದಿಷ್ಟ ಚಿಕಿತ್ಸಾ ವಿಧಾನಗಳ ಮೂಲಕ ಬಳಸಲಾಗುತ್ತದೆ. ಇದು ದೇಹದ ಚೇತರಿಕೆ, ರಕ್ತಪರಿಚಲನೆ ಹಾಗೂ ಉರಿಯೂತವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಚಿಕಿತ್ಸೆಯ ಪರಿಣಾಮವು ವಿಧಾನ, ಪ್ರಮಾಣ, ಚಿಕಿತ್ಸಾ ಉದ್ದೇಶ ಮತ್ತು ರೋಗಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಸೂಕ್ತ ವೈದ್ಯಕೀಯ ಮೌಲ್ಯಮಾಪನದ ಬಳಿಕ, ತರಬೇತಿ ಪಡೆದ ಆರೋಗ್ಯ ವೃತ್ತಿಪರರ ಮೇಲ್ವಿಚಾರಣೆಯಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಉಡುಪಿ ಹೂಡೆಯ ಬೀಚ್ ಹೀಲಿಂಗ್ ಹೋಮ್‌ನ ನಿರ್ದೇಶಕ ಡಾ. ಮೊಹಮ್ಮದ್ ರಫೀಕ್, ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಚಾರ್ಯೆ ಡಾ. ವನಿತಾ ಶೆಟ್ಟಿ, ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ರೋಷನ್ ಪಿಂಟೋ, ಮುನಿಯಾಲು ಪ್ರಕೃತಿ ಚಿಕಿತ್ಸಾ ಕಾಲೇಜಿನ ಉಪನ್ಯಾಸಕ ಡಾ. ಸತಪಾ ಉಪಸ್ಥಿತರಿದ್ದರು.

ಅಮೂಲ್ಯ ಹೆಚ್‌ಆರ್ ನಿರ್ವಹಿಸಿದರು.

















































error: Content is protected !!
Scroll to Top