ಸ್ವಾಮಿ ನಿಮ್ಮ ಸಂಪುಟದ ಸಚಿವರಿಗೆ ಇರುವ ಭಯ ಲಂಚದ್ದೋ, ಬೇರೆಯದೋ? ಎಂದು ಕೇಳಿದ ಶಾಸಕ
ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಸ್ಟಿಂಗ್ ಆಪರೇಷನ್ ಭಯವಿದೆ ಎಂದು ಹೇಳಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸುನೀಲ್ ಕುಮಾರ್, ಕರ್ನಾಟಕ ರಾಜ್ಯದಲ್ಲಿ ಈ ಮಟ್ಟಿಗಿನ ಅರಾಜಕತೆಯನ್ನು ಹಿಂದೆಂದೂ ಕಂಡಿರಲಿಲ್ಲ. ಪ್ರಿಯಾಂಕ ಖರ್ಗೆಯವರಂಥ “ಸಮರ್ಥ” ಗೃಹ ಸಚಿವರಿರುವಾಗಲೂ ನಾಡಿನ ಮುಖ್ಯಮಂತ್ರಿಯೊಬ್ಬರು ನನ್ನನ್ನೂ ಸೇರಿ ಸಮಸ್ತ ಸಚಿವ ಸಂಪುಟಕ್ಕೆ ಸ್ಟಿಂಗ್ ಆಪರೇಷನ್ ಭಯ ಇದೆ ಎಂದು ಹೇಳುತ್ತಿದ್ದಾರೆ. ಎಚ್ಚರಿಕೆಯಿಂದ ಇರಿ ಎಂದು ಸಂಪುಟ ಸಭೆಯಲ್ಲೇ ಸಲಹೆ ನೀಡುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಯಾವ ಮಟ್ಟಿಗಿನ ಅರಾಜಕತೆ ಸೃಷ್ಟಿಯಾಗಿದೆ ಎಂದು ಊಹಿಸಿ. ಬಹುಶಃ ರಾಜ್ಯದಲ್ಲಿ ಇಂಥ ” ಬನಾನಾ ರಿಪಬ್ಲಿಕ್ ” ವ್ಯವಸ್ಥೆ ಹಿಂದೆಂದೂ ಕಂಡಿರಲಿಲ್ಲ.
ಇಷ್ಟೊಂದು ಗಂಭೀರ ಆರೋಪ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಯಾವ ಕಾರಣಕ್ಕೆ ಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂಬುದನ್ನೂ ಬಹಿರಂಗಪಡಿಸಬೇಕು.
ಕಾಂಗ್ರೆಸ್ ಕಲಿಗಳನ್ನು ಖೆಡ್ಡಾಕ್ಕೆ ಕೆಡವಲು ವೇಷ ಮರೆಸಿಕೊಂಡು ಬಂದಿರುವ ಆ ಜಾಲ ಯಾವುದು ?ಅದರ ಹಿಂದಿರುವ ಕಾಣದ ಕೈ ಯಾವುದು ? ಸ್ಟಿಂಗ್ ಆಪರೇಷನ್ ಮೂಲಕ ಸಿಡಿ ಮಾಡಿಟ್ಟುಕೊಂಡು ಬೆದರಿಸುವ ಚಾಳಿ ಯಾರಿಗಿದೆ ? ಎಂಬುದನ್ನು ಖುದ್ದು ಮುಖ್ಯಮಂತ್ರಿಗಳೇ ಈಗ ರಾಜ್ಯದ ಜನತೆಗೆ ತಿಳಿಸಬೇಕು.
ಮುಖ್ಯಮಂತ್ರಿಗಳಿಗೆ ಈ ಪರಿಯ ಭಯ ಇದೆ ಎಂದರೆ ನಾಡಿನ ಜನರ ಕತೆ ಏನು ? ಇಷ್ಟೊಂದು ಗಂಭೀರ ಆರೋಪವನ್ನು ಮುಖ್ಯಮಂತ್ರಿಗಳು ಮಾಡಿದ್ದರೂ ಇದುವರೆಗೆ ಯಾಕೆ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಿಲ್ಲ ? ಈ ಹಿಂದೆ ಸಚಿವರಾಗಿದ್ದ ರಾಜಣ್ಣ ಅವರು ವಿಧಾನಸಭೆಯಲ್ಲೇ ಹನಿಟ್ರ್ಯಾಪ್ ಆರೋಪ ಮಾಡಿದ್ದರು. ಈ ಬಗ್ಗೆ ಯಾವುದೇ ತನಿಖೆ ನಡೆಸದೇ ಮುಚ್ಚಿ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಈ ವಿಚಾರವೂ ಅದೇ ರೀತಿ ಸದ್ದಿಲ್ಲದೇ ಸತ್ತು ಹೋಗಬಾರದು.
ಪ್ರತಿಯೊಂದಕ್ಕೂ ಎಸ್ಐಟಿ ರಚಿಸುವ ರಾಜ್ಯದ ಗೃಹ ಸಚಿವರು ಈ ವಿಚಾರದಲ್ಲಿ ಮಾತ್ರ ಯಾಕೆ ಸುಮ್ಮನಿದ್ದಾರೆ ?
ಇದೆಲ್ಲದಕ್ಕೂ ಉತ್ತರ ನೀಡದೇ ಹೋದರೆ ಸ್ಟಿಂಗ್ ಆಪರೇಷನ್ ಹೇಳಿಕೆ ಮುಖ್ಯಮಂತ್ರಿಗಳ ಹಿಟ್ ಆಂಡ್ ರನ್ ತಂತ್ರ ಎಂದು ಅರ್ಥೈಸಬೇಕಾಗುತ್ತದೆ. ಹೇಳಿ ಸ್ವಾಮಿ ನಿಮ್ಮ ಸಂಪುಟದ ಸಚಿವರಿಗೆ ಇರುವ ಭಯ ಲಂಚದ್ದೋ, ಬೇರೆಯದೋ? ಎಂದು ಪ್ರಶ್ನೆ ಮಾಡಿದ್ದಾರೆ.
























