ಕಾರ್ಕಳದಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕರು

ಕರಾವಳಿಯಲ್ಲಿ ಸಿಎಂ ಮೀಟಿಂಗ್ ಬಳಿಕ ನಮ್ಮ ಜಿಲ್ಲೆಯ ಶಾಸಕರು ಅಲೆಮಾರಿ ಜೀವನ ಮಾಡುತ್ತಿದ್ದಾರೆ ಎಂದು ವ್ಯಂಗ್ಯ

ಕಾರ್ಕಳ: ಕೆಲ ದಿನಗಳ ಹಿಂದೆ ಕಾರ್ಕಳದಲ್ಲಿ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇಂದು ಬಿಜೆಪಿಯ ವಿರುದ್ಧ ಕಾಂಗ್ರೆಸ್ ಸತ್ಯಮೇವ ಜಯತೇ ಹೆಸರಿನಲ್ಲಿ ಪ್ರತಿಭಟನೆ ನಡೆಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಕರ್ನಾಟಕ ಸರ್ಕಾರ ಝೀರೋ ಬ್ಯಾಲೆನ್ಸ್ ಸರ್ಕಾರ ಎಂದು ಪ್ರತಿಭಟನೆ ಮಾಡಿದ ಶಾಸಕರು, ಸಂಸದರ ಜ್ಞಾನ ಝೀರೋ. ಎಸ್ ಐ ಆರ್ ಹೆಸರಿನಲ್ಲಿ ದೇಶದಲ್ಲಿ ಬಿಜೆಪಿ ತನ್ನ ಮಾನ ಮರ್ಯಾದೆಯನ್ನು ಈಗಾಗಲೇ ಕಳೆದುಕೊಂಡಿದೆ. ಮುಖ್ಯಮಂತ್ರಿಗಳು ಕರಾವಳಿಗೆ ಬಂದು ಮೀಟಿಂಗ್ ಮಾಡಿದಾಗ ನಮ್ಮ ಜಿಲ್ಲೆಯ ಶಾಸಕರ ಅಲೆಮಾರಿ ಜೀವನ ಪ್ರಾರಂಭವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊನ್ನೆ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ಜಿಲ್ಲೆಯ ಶಾಸಕರು ಕಾರ್ಕಳ ಶಾಸಕರ ಪಾಪದಲ್ಲಿ ಪಾಲುದಾರರಾ? ಎಂದು ಕೇಳಿಕೊಳ್ಳಬೇಕು. ಝೀರೋ ಬ್ಯಾಲೆನ್ಸ್ ಇದ್ದು ಜೋಳಿಗೆ ಹಿಡಿದುಕೊಂಡು ಬಂದ ಶಾಸಕರು ಈಗ ರಾಜ್ಯದ ಕೋಟಿ ದುಡ್ಡಿರುವ ಶಾಸಕರ ಪೈಕಿ ಒಬ್ಬರು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಅನೇಕ ಮಸೀದಿ, ಮಂದಿರ ಚರ್ಚ್ ಗಳಿಗೆ ಸರಕಾರ ಅನುದಾನ ನೀಡಿದೆ. ಬಿಜೆಪಿಗರು ಹೋದಲ್ಲೆಲ್ಲಾ ಗುದ್ದಲಿ ಪೂಜೆ ಶಂಕುಸ್ಥಾಪನೆ ಮಾಡಿಕೊಂಡು ಬರುತ್ತಾರೊ. ಯಾವ ದುಡ್ಡಿನಿಂದ ಗುದ್ದಲಿ ಪೂಜೆ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ಸರ್ಕಾರ ಝೀರೋ ಬ್ಯಾಲೆನ್ಸ್ ಆದರೆ ಮೂರು ವರ್ಷದಿಂದ ನಿಮಗೆ ಸಂಬಳ, ಭತ್ಯೆ ಬರುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ. ಈಗ ರದ್ದಾಗುತ್ತಿರುವ ರೇಷನ್ ಕಾರ್ಡ್ ನಿಮ್ಮ ಬಿಜೆಪಿ ಸರಕಾರದ ಬೋಗಸ್ ರೇಷನ್ ಕಾರ್ಡ್ಗಳು. ಬಿಪಿಎಲ್ ಕಾರ್ಡ್ ಪಡೆಯಲು ಇದ್ದ ಆದಾಯ ಮಿತಿಯನ್ನು ಹೆಚ್ಚಿಸಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ ಎಂದಿದ್ದಾರೆ.

ಲಕೆಡಿಪಿ ಸಭೆಯ ಮೂಲಕ ಜನರ ಸಮಸ್ಯೆ ಆಲಿಸಬೇಕಿದ್ದ ಶಾಸಕರು ಕೆಡಿಪಿ ಸಮಿತಿ ರಚನೆಯಾದರೂ ಸಭೆ ಯಾಕೆ ನಡೆಸುತ್ತಿಲ್ಲ? ಕಾರ್ಕಳಕ್ಕೆ ಸಂಸದರು ಬಂದಾಗ ಏನಾದ್ರೂ ಹೇಳುತ್ತಾರೆ ಎಂಬ ಭರವಸೆ ಇತ್ತು. ಕೇಂದ್ರದಿಂದ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಹೇಳಬಹುದಿತ್ತು. ಅವರು ಯಾಕೆ ಹೇಳಿಲ್ಲ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರ್ನಾಟಕ ಸರ್ಕಾರ ಬಿಲ್ಲವ, ಈಡಿಗ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಸಂಸದರು ಹೇಳಿದ್ದಾರೆ. ರಾಜ್ಯ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಬಿಲ್ಲವರಲ್ಲವೇ?. ಬಿಜೆಪಿ ಬಿಲ್ಲವ ಸಮುದಾಯದ ಯುವಕರ ಕೈಯಲ್ಲಿ ಕೊಟ್ಟದ್ದು ಕತ್ತಿ, ಚೂರಿ, ತಲವಾರು. ಸಂಘಟನೆ ಮೂಲಕ ಜೈಲಿಗಟ್ಟಿದ್ದು ಬಿಜೆಪಿ ಯ ಕೊಡುಗೆ ಎಂದಿದ್ದಾರೆ. ಯಶ್‌ ಪಾಲ್ ಸುವರ್ಣ ಅವರೇ ನಿಮ್ಮ ಬ್ಯಾಂಕ್‌ನ ಮ್ಯಾನೇಜ‌ರ್ ಆತ್ಮಹತ್ಯೆ ಮಾಡಲು ನೀವು ಕಾರಣ ಎಂಬ ಆರೋಪ ಇದೆ. ನೀವು ಕಾರ್ಕಳಕ್ಕೆ ಬಂದು ಕಾಂಗ್ರೆಸ್ ಬಗ್ಗೆ ಮಾತನಾಡಬೇಕಾ ಎಂದು ಕೇಳಿದ್ದಾರೆ.

ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾರ್ಕಳ ಪ್ರತಿಷ್ಠಿತವಾದ ಕ್ಷೇತ್ರ. ಇಂದಿರಾಗಾಂಧಿಯವರು ಹೆಚ್ಚಿನ ಅಂತರದಿಂದ ಜಯಗಳಿಸಿದ ಕ್ಷೇತ್ರ. ವೀರಪ್ಪ ಮೊಯಿಲಿರವರು ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾದ ಕ್ಷೇತ್ರ ಇದು. ತಮಗೆ ಮೂರೂವರೇ ವರ್ಷದಲ್ಲಿ ಮಾಡಲಾಗದ ಕೆಲಸ ಈಗ ಇಲ್ಲಿನ ಶಾಸಕರಿಗೆ ನೆನಪಾಗುತ್ತಿದೆ. ಅವರ ಲೋಪದೋಷಗಳನ್ನು ನಮ್ಮ ಮೇಲೆ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಪಿಡಬ್ಲ್ಯೂ ಇಲಾಖೆಯಲ್ಲಿ 30,000 ಕೋಟಿ ಅನುದಾನ ಘೋಷಣೆ ಮಾಡಿದ್ದರು‌. ಕೋಟ ಶ್ರೀನಿವಾಸ ಪೂಜಾರಿಯವರು ಅನುದಾನ ಇಲ್ಲದೇ 1000 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಬಡವರ ರಕ್ತ ಹೀರುವ ಬಿಜೆಪಿ ಸರ್ಕಾರ ಅಕ್ಕಿ, ದಿನಬಳಕೆಯ ವಸ್ತುಗಳ ಮೇಲೆ ಜಿ ಎಸ್ ಟಿ ಹಾಕಿದಾಗ ಇದರ ವಿರುದ್ಧ ಹೋರಾಟ ಮಾಡುವ ಕೆಲಸ ಮಾಡಿದ್ದೆವು ಎಂದಿದ್ದಾರೆ.

ಓಟು ಚೋರಿ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಎಸ್ ಐ ಆರ್ ಪ್ರಕ್ರಿಯೆಯಲ್ಲಿ 13 ಕೋಟಿ ಮತದಾರರನ್ನು ಕೈಬಿಟ್ಟಿದ್ದಾರೆ. ಮತದಾನದ ಹಕ್ಕನ್ನು ಕಸಿದ ಮೇಲೆ ಯಾವ ಪಿಂಚಣಿ, ಯಾವ ರೇಷನ್ ಕಾರ್ಡ್? ಜನರಿಗೆ ಪೌರತ್ವ ಇಲ್ಲದಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

80 ಬಡಗುಬೆಟ್ಟುವಿನಲ್ಲಿ ಯಾವುದೇ ಸಭೆ ನಡೆಸದೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಾರದೇ ಕಂಬಳ ಸಮಿತಿ ರಚನೆ ಮಾಡಿ ಗುದ್ದಲಿ ಪೂಜೆಯನ್ನು ಅಧಿಕಾರದ ದುರುಪಯೋಗ ಪಡಿಸಿ ಬಲಪ್ರಯೋಗದ ಮೂಲಕ ಮಾಡಲು ಹೊರಟಾಗ ಶಾಸಕರ, ಸಂಸದರ, ವಿಧಾನ ಪರಿಷತ್‌ ಸದಸ್ಯರ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲಿದ್ದ ರಕೇಶ್ವರೀ ಕಟ್ಟೆ ಒಡೆದು ಹಾಕಿ, ನಾಗ ಬನಕ್ಕೆ ಬೆಂಕಿ ಹಾಕಿ ಕಂಬಳ ಗದ್ದೆ ನಿರ್ಮಾಣ ಮಾಡಲು ಹೊರಟವರು ಧರ್ಮದ ಮೇಲೆ ಮತ ಕೇಳುತ್ತಾರೆ. ಪುತ್ತೂರಲ್ಲಿ ಪ್ರಪ್ರಥಮವಾಗಿ ಕಂಬಳ ಪ್ರಾರಂಭಿಸಿದ್ದೇ ನಾನು ಎಂದು ಹೇಳಿದ್ದಾರೆ.

ಬಡವರು ರಿಯಲ್ ಎಸ್ಟೇಟ್ ಮೂಲಕ ಜಾಗ ಖರೀದಿ ಮಾಡಬೇಕು ಎನ್ನುವ ಉದ್ದೇಶದಿಂದ ನಾನು ಬಡವರಿಗೆ ಮೀಸಲಿಟ್ಟ ಜಾಗವನ್ನು ಗ್ರಾಮ ಪಂಚಾಯತ್‌ಗೆ ಹಿಂದಿರುಗಿಸುವ ಕೆಲಸ ಕಾಪು ಶಾಸಕರು ಮಾಡಿದ್ದಾರೆ. ಅಯೋಧ್ಯೆ ಹೆಸರಿನಲ್ಲಿ ಇಟ್ಟಿಗೆ, ಹಣ ಸಂಗ್ರಹಿಸಿದರು. ಕಲ್ಲಡ್ಕ ಪ್ರಭಾಕರ ಭಟ್ ರವರು ಆರ್ ಎಸ್ ಎಸ್ ಚಡ್ಡಿ ಹಾಕಿಕೊಂಡು ಅದರ ಮೇಲೆ ಕಾಲು ಇಟ್ಟುಕೊಂಡು ಲಾರಿಯಲ್ಲಿ ಇಟ್ಟಿಗೆ ಕೊಂಡು ಹೋದರು. ರಾಮಮಂದಿರ ನಿರ್ಮಾಣವಾದದ್ದು ಕಲ್ಲಿನಿಂದ ಹಾಗಾದರೆ ಇಟ್ಟಿಗೆ ಎಲ್ಲಿಗೆ ಹೋಯಿತು. ರಾಮ ದೇವರ ಶಾಪ ಬಿಜೆಪಿಗೆ ಇದೆ. ಪ್ರತೀ ಸಲ ಜನರ ದಾರಿ ತಪ್ಪಿಸುವ ಇವರು ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಿಕ್ಕಿ ಹಾಕಿಕೊಂಡರು ಎಂದು ತಿಳಿಸಿದ್ದಾರೆ.

ಅನ್ನ ಭಾಗ್ಯ ಕಾರ್ಯಕ್ರಮ ಮೊದಲು ಪ್ರಾರಂಭಮಾಡಿದ್ದೇ ಸಿದ್ದರಾಮಯ್ಯನವರು. ಅನ್ನ ಭಾಗ್ಯ ಯೋಜನೆಯ ಬಗ್ಗೆ ಕಾಪು ಶಾಸಕರಿಗೆ ಮಾಹಿತಿ ಇಲ್ಲ. ಶ್ರೀನಿವಾಸ ಪೂಜಾರಿಯವರು ಈಡಿಗರ ಬಗ್ಗೆ ಬಹಳ ಮಾತನಾಡುತ್ತಾರೆ. ಬಂಗಾರಪ್ಪನವರು ಇದೇ ಈಡಿಗ ಸಮುದಾಯದಿಂದ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ನಮ್ಮಲ್ಲಿ ಆನೆ ಕದ್ದವರನ್ನು ನೋಡಿದ್ದೇನೆ. ಇಲ್ಲಿ ಗುಜ್ಜೆ (ಹಲಸಿನ ಹಣ್ಣು) ಕಳ್ಳನನ್ನು ಕ್ಷೇತ್ರದ ಅಧ್ಯಕ್ಷನನ್ನಾಗಿ ಮಾಡಿದರು. ಅದು ಐದು ಕೋಟಿ ಬೆಲೆಯ ಗುಜ್ಜೆ ಎಂದು ವ್ಯಂಗ್ಯವಾಡಿದ್ದಾರೆ.

ಮೊನ್ನೆ ಭಾಗವಹಿಸಿದ ಅಕ್ಕಂದಿರಲ್ಲಿ ಪಂಚ ಗ್ಯಾರಂಟಿ ಯೋಜನೆಯ ಬಗ್ಗೆ ಕೇಳಿ ಫಲಾನುಭವಿಗಳು ಕೈ ಎತ್ತಿ ಎಂದಿದ್ದರೆ ಎಲ್ಲರೂ ಎತ್ತುತ್ತಿದ್ದರು. ನೀವು ಘಟ್ಟದಿಂದ ಸಮುರಾಯಿ ಬೈಕ್‌ ಹತ್ತಿ ಬರುವಾಗ ನಿಮ್ಮ ಅಕೌಂಟ್ ನಲ್ಲಿ ಝೀರೋ ಬ್ಯಾಲೆನ್ಸ್ ಇತ್ತು. ಈಗ ಕೋಟಿಗಟ್ಟಲೆ ತುಂಬಿದೆ. ಇರಲಿ ನಾವೇನು ಅದನ್ನು ಹ್ಯಾಕ್ ಮಾಡುವುದಿಲ್ಲ. ಗುರ್ಮೆ ಸುರೇಶಣ್ಣ ಹಗಲೇ ಗಡಂಗ್ ಅಂತ ಗೊತ್ತಿರಲಿಲ್ಲ. ಸಿದ್ದರಾಮಯ್ಯನವರ ಪಂಚೆ ಪರ್ ಅಂತೆ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಪ್ಯಾಂಟ್ ಪುರ್ ಎಂದು ಹರಿಯಲಿದೆ ಎಂದು ತಿರುಗೇಟು ನೀಡಿದ್ದಾರೆ.
ಕೋಟ ಶ್ರೀನಿವಾಸಣ್ಣ ಒಳ್ಳೆಯ ಜನ. ಆದರೆ ಅವರು ಮಂತ್ರಿಯಾಗುವಾಗ ಸಂಚು ರೂಪಿಸಿದವರು ಸುನಿಲಣ್ಣ. ಶ್ರೀನಿವಾಸ ಶೆಟ್ರು ಮಂತ್ರಿಯಾಗುವಾಗಲೂ ಸಂಚು ರೂಪಿಸಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರು ಕಸ್ತೂರಿ, ರಂಗನ್ ಬೇರೆ ಬೇರೆ ಎಂದು ತಿಳಿದಿದ್ದಾರೆ. ಇಬ್ಬರೂ ಗಂಡ ಹೆಂಡತಿ ಎಂದು ಎಣಿಸಿದ್ದಾರೆ. ಇಬ್ಬರೂ ಸೇರಿ ತಯಾರಿಸಿದ ವರದಿ ಎಂದು ಭಾವಿಸಿ ಬಾಳೆಹೊನ್ನೂರಿನಲ್ಲಿ ಮಾತನಾಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿಯವರು ಕೇಂದ್ರ ಪರಿಸರ ಸಚಿವರನ್ನು ತಂದು ಜನರ ಮುಂದೆ ನಿಲ್ಲಿಸಿ ಸಭೆ ನಡೆಸಲಿ. ಕೋಟ ಶ್ರೀನಿವಾಸ ಪೂಜಾರಿ ಯವರು ಸಂಸದರಾಗಿ ಚುನಾಯಿತರಾದಾಗ ಸುನಿಲ್ ಕುಮಾರ್ ಸಂತಸ ಪಟ್ಟಿದ್ದರು. ಕಾರಣ ಕೊನೆಗೂ ಕೇಂದ್ರ ರಾಜಕಾರಣಕ್ಕೆ ಹೋದರೆಂದು ಸಂತೋಷ ಪಟ್ಟಿದ್ದರು ಎಂದು ಹೇಳಿದ್ದಾರೆ.

ಕಾಕಾ ಪಾಟೀಲ್ ಗೆ ಮಾತ್ರ ಅಲ್ಲ. ಇಲ್ಲಿನ ಗುಜ್ಜೆ ಕಳ್ಳನ ಮನೆಗೂ ಕರೆಂಟ್ ಫ್ರೀ ಇದೆ. ಯಡಿಯೂರಪ್ಪ ಹಾಗೂ ಶೋಭಕ್ಕ ಸೇರಿ ಸೀರೆ ಹಾಗೂ ಸೈಕಲ್‌ ಕೊಟ್ಟಿದ್ದರು. ಈಗ ಸೈಕಲ್ ತುಂಡಾಗಿದೆ ಸೀರೆ ಗದ್ದೆಯಲ್ಲಿ ಮಂಗ ಓಡಿಸಲು ಉಪಯೋಗವಾಗುತ್ತಿದೆ. ಗುರ್ಮೆ ಸುರೇಶ್ ಶೆಟ್ಟಿ ರವರು ನಾವು ಜಿಲ್ಲೆಯ ಪಂಚ ಪಾಂಡವರು ಎಂದಿದ್ದಾರೆ. ನಿಮ್ಮ ಪಂಚ ಪಾಂಡವರ ಪಂಚೆ ಏನೇನಾಗಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ನುಡಿದಿದ್ದಾರೆ.

ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ,
ಇಂತಹ ಕಾರ್ಯಕ್ರಮ ಮಾಡುವ ದುರ್ಧೈವ ಬರುತ್ತದೆ ಎಂದು ಎಣಿಸಿರಲಿಲ್ಲ. ಇದರ ಪಿತಾಮಹ ಸುನಿಲ್ ಕುಮಾರ್. ಮೊನ್ನೆ ಮಾನ್ಯ ಮುಖ್ಯಮಂತ್ರಿಗಳು ಕರಾವಳಿಯಲ್ಲಿ ಅಧಿವೇಷನ ನಡೆಸಿ ಅಭಿವೃದ್ಧಿಗೆ ಹಣ ಘೋಷಣೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಹೆಬ್ರಿಯಲ್ಲಿ ಜನರ ಸಮಸ್ಯೆ ಆಲಿಸಲು ಸಭೆ ನಡೆಸಿರುವುದು ಚರಿತ್ರೆಯ ಪುಟ ಸೇರಿದೆ.ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್‌ ಶಕ್ತಿ ಏನೆಂದು ತೋರಿಸಿಕೊಟ್ಟಿದೆ. ಪಂಚ ಗ್ಯಾರಂಟಿ ಯೋಜನೆ ಮೂಲಕ ಮನೆ ಮನೆಗೆ ಅನುಕೂಲ ಮಾಡಿಕೊಟ್ಟಿದೆ. ಕಾರ್ಕಳದಲ್ಲಿ ಅಪಚಾರ ರಾಜಕೀಯದ ಬಗ್ಗೆ ಹೇಳಲು ಒಂದು ದಿನ ಸಾಕಲಿಲ್ಲ. ಸುನಿಲ್ ಕುಮಾರ್ ಸ್ಥಾಪಿಸಿದ ಒಂದು ಶಾಲೆ, ಕಾಲೇಜು, ಕೈಗಾರಿಕೆ ಯಾವುದಾದರೂ ಇದ್ದರೆ ಹೇಳಿ ಎಂದಿದ್ದಾರೆ.
ಜಗತ್ತಿನಲ್ಲಿ ಧರ್ಮ ಭ್ರಷ್ಟ ವ್ಯಕ್ತಿ ಇದ್ದರೆ ಅದು ಸುನಿಲ್ ಕುಮಾರ್. ಪರಶುರಾಮ ಥೀಂ ಪಾರ್ಕ ನ ಮೂರ್ತಿ ಬಗ್ಗೆ ಇಷ್ಟಾದರೂ ತಪ್ಪು ಒಪ್ಪಿಕೊಳ್ಳುವ ಮನೋಭಾವ ಇಲ್ಲ ಎಂದು ತಿಳಿಸಿದ್ದಾರೆ.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮೋದಿಯವರು ಝೀರೋ ಬ್ಯಾಲೆನ್ಸ್ ಆಗಿ ತೆರೆದ ಖಾತೆ ಈಗಲೂ ಝೀರೋ ಇದೆ. ಹದಿನೈದು ಲಕ್ಷ ಈವರೆಗೂ ಬರಲಿಲ್ಲ. ಬೇರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಬಿಜೆಪಿ ಸರ್ಕಾರ ಅನುಷ್ಟಾನ ಮಾಡಿದ್ದೀರಿ. ಅಲ್ಲಿನ ನಿಮ್ಮ ಸರ್ಕಾರ ದಿವಾಳಿಯಾಗಿದಾ? ಕಾಂಗ್ರೆಸ್ ಗೆ ಓಟು ಹಾಕಿದವರಿಗಿಂತ ಓಟು ಹಾಕದವರು ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸರ್ಕಾರ ಯೋಜನೆ ಘೋಷಣೆ ಮಾಡುವಾಗ ಮೊದಲೇ ಅನುದಾನ ಮೀಸಲಿಡುತ್ತಾರೆ. ಕಡಿಮೆ ಆದಾಗ ಸಪ್ಲಿಮೆಂಟರಿ ಬಜೆಟ್ ಮೂಲಕ ಹಣ ಒದಗಿಸುತ್ತದೆ ಎಂದಿದ್ದಾರೆ.

ಶಾಸಕರು ಈ ಹಿಂದೆ ಸಚಿವರಾಗಿದ್ದಾಗ ಹಿಂದುಳಿದ ವರ್ಗಕ್ಕೆ ಯಾವ ಯಾವ ಅನುದಾನ ನೀಡಿದ್ದೀರಿ ಎಂದು ಲೆಕ್ಕ ಕೊಡುತ್ತೀರಾ? ನಮ್ಮ ನಾಯಕರಿಗೆ ಸರಕಾರಕ್ಕೆ ಬೈದರೆ ಸಾಕಾಗುವುದಿಲ್ಲ. ವಿಧಾನ ಸೌದದಲ್ಲಿ ಯಾವ ಖಾತೆಯಲ್ಲಿ ಎಷ್ಟಿದೆ ಎಂದು ಚರ್ಚೆ ಮಾಡಬಹುದಿತ್ತು. ಹಣಕಾಸು ಸಚಿವರು ಉತ್ತರ ನೀಡುತ್ತಿದ್ದರು. ಝೀರೋ ಬ್ಯಾಲೆನ್ಸ್ ಎಂಬ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ಯಾರು ಬಿಜೆಪಿಗೆ ಓಟು ಹಾಕುವುದಿಲ್ಲವೋ ಅವರ ಓಟನ್ನು ಎಸ್ ಐ ಆರ್ ಮೂಲಕ ತೆಗೆಯುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ.

ಕಸ್ತೂರಿ ರಂಗನ್ ವರದಿ ಬಗ್ಗೆ ನಾವೂ ಹೋರಾಟ ಮಾಡಿದ್ದೇವೆ. ಬಿಜೆಪಿಯವರು ಮತ ಪಡೆಯಲು ಮಾತ್ರ ಈ ವಿಷಯ ಬಳಕೆ ಮಾಡುತ್ತಿದ್ದಾರೆ. ಜನರ ಸಮಸ್ಯೆಯನ್ನು ವಿಧಾನ ಸೌಧದಲ್ಲಿ ಚರ್ಚೆ ಮಾಡಿ. ಕೋಳಿ ಅಂಕದ ವಿಷಯ ವಿಧಾನ ಸೌಧದಲ್ಲಿ ಚರ್ಚೆ ಮಾಡುವುದಲ್ಲ. ಪರಶುರಾಮ ಥೀಂ ಪಾರ್ಕ್ ಸಂಪೂರ್ಣ ಮಾಡುವ ಪ್ರಯತ್ನವನ್ನು ನಾವೆಲ್ಲಾ ಸೇರಿ ಶೀಘ್ರದಲ್ಲಿಯೇ ಮಾಡಲಿದ್ದೇವೆ ಎಂದಿದ್ದಾರೆ.

















































error: Content is protected !!
Scroll to Top