ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ವೇದಿಕೆಯಡಿ ಕಲ್ಪಿಸುವ ಡಿಜಿಟಲ್ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಮಾಡಲಾಗಿದೆ.
ಒನ್ ಕರ್ನಾಟಕ ಮೊಬಿಲಿಟ್ ಆ್ಯಪ್ ಮೂಲಕ ಎಲ್ಲಾ ನಿಗಮಗಳ ಸೇವೆಗಳು ಒಂದೇ ಕಡೆ ಸಿಗಲಿವೆ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಒನ್ ಕರ್ನಾಟಕ ಮೊಬಿಲಿಟಿ ಆಯಪ್ – ಕೆಎಸ್‌ಆರ್‌ಟಿಸಿ ಅವತಾರ್ 2.0′ ನವೀಕೃತ ಮೊಬೈಲ್ ಆಯಪ್ ಹಾಗೂ ವಾಟ್ಸ್‌ಆಯಪ್ ಟಿಕೆಟಿಂಗ್‌ಗೆ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.

ಈ ಆ್ಯಪ್‌ನಲ್ಲಿ ಸುರಕ್ಷಿತ ಲಾಗಿನ್ ವ್ಯವಸ್ಥೆಯ ಮೂಲಕ ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕಿಂಗ್‌ಗಳ ವಿವರ ವೀಕ್ಷಣೆ ಹಾಗೂ ವಹಿವಾಟುಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಯಾಣಿಕರ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ದೂರುಗಳ ಸ್ಥಿತಿಯನ್ನು ಪರಿಶೀಲನೆ ನಡೆಸುವುದು, ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಸೌಲಭ್ಯ ದೊರೆಯಲಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ತಿಂಗಳ ಪಾಸ್ ವ್ಯವಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಬಸ್ ಪಾಸ್ ಬುಕಿಂಗ್, ವಿತರಣೆ ಹಾಗೂ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ. ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ವಾಟ್ಸ್ಯಾಪ್ ಮೂಲಕ ಟಿಕೆಟ್ ಬುಕಿಂಗ್
ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಬಸ್‌ಗಳ ಟಿಕೆಟ್ ಅನ್ನು ವ್ಯಾಟ್ಸ್ಯಾಪ್ ಮೂಲಕ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು 6364940880 ಸಂಖ್ಯೆಗೆ ವಾಟ್ಸ್ಯಾಪ್ ಸಂದೇಶವನ್ನು ಕಳುಹಿಸುವ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್ ಸೇರಿದಂತೆ ವಿವಿಧ ಪಾವತಿ ವಿಧಾನಗಳನ್ನು ಬಳಸಬಹುದು. ಪಾವತಿ ಯಶಸ್ವಿಯಾದ ನಂತರ ಬುಕಿಂಗ್ ದೃಢೀಕರಣ ಹಾಗೂ ಇ-ಟಿಕೆಟ್ ಅನ್ನು ವಾಟ್ಸ್ಯಾಪ್ ಮತ್ತು ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಕಳುಹಿಸಿಕೊಡಲಾಗುತ್ತದೆ. ವಾಟ್ಸ್ಯಾಪ್ ಮೂಲಕವೇ ಟಿಕೆಟ್ ರದ್ಧತಿಗೂ ಅವಕಾಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.































