ಮಹಾವೀರ ಜಯಂತಿ ಆಚರಣೆಗೆ ಸೀಮಿತವಾಗದೆ ಪರಿಪಾಲನೆಯಾಗಲಿ -ಲಲಿತ ಕೀರ್ತಿ ಸ್ವಾಮೀಜಿ

ಕಾರ್ಕಳ : ಮಹಾವೀರ ಜಯಂತಿ ಆಚರಣೆಗೆ ಸೀಮಿತವಾಗದೇ ಅವರ ತತ್ವ, ಆದರ್ಶಗಳ ಪರಿಪಾಲನೆಯಾಗಬೇಕೆಂದು ಸ್ವಸ್ತೀ ಶ್ರೀ ಲಲಿತಾಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ಅವರು ಎ. 4 ರಂದು ಮಹಾವೀರ ಜಯಂತಿ ಪ್ರಯುಕ್ತ ಹಿರಿಯಂಗಡಿ ಮಹಾವೀರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಪ್ರಸ್ತುತ ಶಿಕ್ಷಣದ ಜೊತೆಗೆ ಮುಂದಿನ ಪೀಳಿಗೆಗೆ ಸಂಸ್ಕಾರಯುತ ಜೀವನವನ್ನು ನೀಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಮಹಾವೀರ ತೀರ್ಥಂಕರಂತಹವರ ಜೀವನದ ಪರಿಪಾಲನೆ ಅವಶ್ಯ. ಸತ್ಯ, ಧರ್ಮ, ಅಹಿಂಸೆ, ತ್ಯಾಗದ ವಿಚಾರದಲ್ಲಿ ಸಮಾಜಕ್ಕೆ ಅವರ ಕೊಡುಗೆ ಅನಂತ ಎಂದರು.

ಕಾರ್ಕಳದ ಪ್ರಸಿದ್ಧಿಯಲ್ಲಿ ಜೈನ ಸಮುದಾಯದ ಕೊಡುಗೆ ಅಪಾರ
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ವಾಗ್ಮಿ ಶ್ರೀಕಾಂತ್‌ ಶೆಟ್ಟಿ, ತುಳುನಾಡಿನ ಧಾರ್ಮಿಕ ಪರಂಪರೆ, ಸಂಸ್ಕೃತಿಯ ಶ್ರೀಮಂತಿಕೆಯಲ್ಲಿ ಜೈನಸಮುದಾಯದ ಪ್ರಭಾವ ಅಪಾರ. ಶಿವಮೊಗ್ಗದಲ್ಲಿರುವ ಕೆಳದಿ ಅರಸರ ಕಾಲದ ಶಾಸನದಲ್ಲಿ ತುಳುನಾಡಿನ ಜೈನ ಸಮುದಾಯದವರ ಉಲ್ಲೇಖವಿರುವುದು ಹೆಮ್ಮೆಯ ವಿಚಾರ. ಆನೆಕೆರೆ, ರಾಮಸಮುದ್ರ ಹೀಗೆ ಕಾರ್ಕಳದ ಭವಿಷ್ಯಕ್ಕೆ ಬೇಕಾದ ವಾತಾವರಣ ನಿರ್ಮಾಣ ಮಾಡಿದಂತಹ ಹೆಗ್ಗಳಿಕೆ ಹಾಗೂ ಬಾಹುಬಲಿ ವಿಗ್ರಹ, ಚತುರ್ಮುಖ ಬಸದಿ, ಹಿರಿಯಂಗಡಿ ಮಾನಸ್ತಂಭ ಮೊದಲಾದವುಗಳೊಂದಿಗೆ ಕಾರ್ಕಳದ ಪ್ರಸಿದ್ಧಿಯಲ್ಲಿ ಜೈನ ಸಮುದಾಯವರ ಕೊಡುಗೆ ಅನನ್ಯ ಎಂದರು.

ದೇಶದ ಅಭಿವೃದ್ಧಿಗೆ ಬೆನ್ನೆಲುಬು
ಜೈನ ಸಮುದಾಯದ ಮಹಾನ್‌ ಪುರುಷರು ನೀಡಿದಂತಹ ಆದರ್ಶ ತತ್ವಗಳ ಅಡಿಪಾಯದಲ್ಲಿ ಇಂದಿಗೂ ಈ ಸಮುದಾಯ ಮುಂದುವರೆಯುತ್ತಿದೆ. ತನ್ಮೂಲಕ ಸಮಾಜದ ಸುಸ್ಥಿರತೆಗೆ ಜೈನ ಸಮುದಾಯದ ಪ್ರಭಾವ ಮಹತ್ತರವಾದುದಾಗಿದೆ. ಉತ್ತರ ಭಾರತದ 16 ಸಾವಿರ ಗೋಶಾಲೆಗಳ ಪೈಕಿ 12 ಸಾವಿರ ಗೋಶಾಲೆಯನ್ನು ನಡೆಸುತ್ತಿರುವವರು ಜೈನ ಸಮುದಾಯದವರು. ದಾನ ಧರ್ಮ, ಚಾರಿಟಿ ವರ್ಕ್ಸ್‌, ಆದಾಯ ತೆರಿಗೆ ಪಾವತಿಯಲ್ಲಿ ಈ ಸಮುದಾಯ ಮಂಚೂಣಿಯಲ್ಲಿದ್ದು ದೇಶದ ಅಭಿವೃದ್ಧಿಗೆ ಬೆನ್ನೆಲುಬಾಗಿದ್ದಾರೆ ಎಂದು ಶ್ರೀಕಾಂತ್‌ ಶೆಟ್ಟಿ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈನ ಧರ್ಮದ ಜೀರ್ಣೋದ್ಧಾರ ಸಂಘದ ಕಾರ್ಯಾಧ್ಯಕ್ಷ ಡಾ. ಎಂ. ಎನ್‌. ರಾಜೇಂದ್ರ ಕುಮಾರ್‌, ಮನಸ್ಸು ಶುದ್ಧವಾಗಿದ್ದಾಗ ಮಾಡುವ ಕಾಯಕವು ಸಾರ್ಥಕತೆಯನ್ನು ಪಡೆಯುತ್ತದೆ. ಶುದ್ಧ ಮನಸ್ಸು ಹೊಂದುವಲ್ಲಿ ಮಹಾವೀರರ ಬದುಕು ಪ್ರೇರಣಾದಾಯಕ ಎಂದು ಅಭಿಪ್ರಾಯಪಟ್ಟರು.

ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್, ಜೈನ್‌ ಮಿಲನದ ನಿರ್ದೇಶಕ ಅಂಡಾರು ಮಹಾವೀರ ಹೆಗ್ಡೆ, ಅವಿಭಜಿತ ದ. ಕ. ಯುವ ಜನ ಸಂಘದ ಅಧ್ಯಕ್ಷ ಪಾರ್ಶ್ವನಾಥ ವರ್ಮ, ಜೈನ್‌ ಮಿಲನ್‌ ಕಾರ್ಯಕಾರಿ ಸಮಿತಿಯ ಜೊತೆ ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ವಿವಿಧ ಜೈನ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರಾವಿಕ ಆಶ್ರಮದ ಮಕ್ಕಳು ಪ್ರಾರ್ಥಿಸಿದರು. ಮಾಲತಿ ವಸಂತರಾಜ್‌ ಸ್ವಾಗತಿಸಿ, ಯೋಗರಾಜ್‌ ಶಾಸ್ತ್ರೀ ನಿರೂಪಿಸಿದರು. ಸುಜಾತ ಫಣಿರಾಜ್‌ ವಂದಿಸಿದರು.















































































































































error: Content is protected !!
Scroll to Top