ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ 60 ದಿನಗಳ ಅನಂತರ ಆ. 3ರಂದು 2.0 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಆ ಪಟ್ಟಿಯಲ್ಲಿ ಹಲವು ಅಚ್ಚರಿ, ಹಲವು ನಿರಾಸೆ ಕಂಡುಬಂದಿದೆ. ಪಟ್ಟಿ ಫೈನಲ್ ಮಾಡಲು ಹೈಕಮಾಂಡ್ 60 ದಿನಗಳ ಕಾಲ ತೆಗೆದುಕೊಂಡಿತೇ ಎಂಬ ಪ್ರಶ್ನೆ ಈಗ ಪಾರ್ಟಿ ವಲಯದಲ್ಲಿ ಹರಿದಾಡುತ್ತಿದೆ. ತುಂಬಾ ಹಿರಿಯರನ್ನು ಕಡೆಗಣಿಸಿದ ಬಗ್ಗೆ ಆಕ್ರೋಶವೂ ಕೇಳಿಬರುತ್ತಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಬಣಗಳು ಈಗ ಜಿದ್ದಿಗೆ ಬಿದ್ದ ಹಾಗೆ ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿವೆ.
ಚಿಕ್ಕಮಗಳೂರಿನಲ್ಲಿ 7 ಶಾಸಕರನ್ನು ಬದಿಗೆ ಸರಿಸಿ ಇನ್ನೂ ಎಂಎಲ್ಸಿ ಆಗಿ ಪ್ರಮಾಣ ಸ್ವೀಕರಿಸದ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಪದವಿ ನೀಡಿರುವುದು ಹಿರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಂತ್ರಿಗಿರಿ ತಪ್ಪಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಭಟ್ಕಳದ ಮಾಜಿ ಶಾಸಕ ಮಂಕಾಳ ವೈದ್ಯ ಅವರ ಹೆಸರು ಬೆಳಿಗ್ಗೆ ಪಟ್ಟಿಯಲ್ಲಿದ್ದು ಸ್ವಲ್ಪ ಹೊತ್ತಿನಲ್ಲಿ ಅವರ ಹೆಸರು ಅಳಿಸಿ ಹಾಕಿ ಎಸ್. ಎಸ್. ಮಲ್ಲಿಕಾರ್ಜುನ ಹೆಸರು ಸೇರ್ಪಡೆಗೊಳಿಸಲಾಗಿದೆ.
ಅತ್ಯಂತ ಹಿರಿಯ ಶಾಸಕರೂ, ಮಾಜಿ ಸಚಿವರೂ ಆದ ಆರ್.ವಿ. ದೇಶಪಾಂಡೆ ಅವರನ್ನು ಕಡೆಗಣಿಸಿ ಸ್ಪೀಕರ್ ಹುದ್ದೆ ನೀಡಲಾಗಿದೆ. ಅವರು ಆ ಹುದ್ದೆ ಸ್ವೀಕರಿಸುವುದು ಕಷ್ಟ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ತನ್ವೀರ್ ಸೇಠ್ ಬೆಂಬಲಿಗರು ಬೀದಿಗೆ ಇಳಿದು ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿದ್ದಾರೆ. ಪ್ರಥಮ ಬಾರಿ ಶಾಸಕರಾಗಿದ್ದು ಯುವಕರ ಗಟ್ಟಿ ಧ್ವನಿಯಾಗಿದ್ದ ಪ್ರದೀಪ್ ಈಶ್ವರ ತನಗೆ ಮಂತ್ರಿಗಿರಿ ಸಿಗಲಿದೆ ಎಂಬ ನಂಬಿಕೆಯಲ್ಲಿದ್ದರು. ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಸ್ಥಾನ ವಂಚಿತರಾಗಿದ್ದಾರೆ. ಡಾ. ಹೆಚ್.ಸಿ. ಮಹಾದೇವಪ್ಪ, ಬೋಸರಾಜು, ಆರ್.ಬಿ. ತಿಮ್ಮಾಪುರ, ರಹೀಮ್ ಖಾನ್, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್ ಹಿರಿತನ ಮತ್ತು ಅನುಭವದಲ್ಲಿ ಮಂತ್ರಿಗಿರಿ ಖಚಿತ ಎಂಬ ವಿಶ್ವಾಸ ಕೈಗೂಡಲಿಲ್ಲ ಹಲವು ಬಾರಿ ಪಕ್ಷಾಂತರ ಮಾಡಿ ಬಿಜೆಪಿ ಸರಕಾರದಲ್ಲಿಯೂ ಉಪ ಮುಖ್ಯಮಂತ್ರಿ ಆಗಿದ್ದ ಲಕ್ಷಣ ಸವದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಸರಕಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಾಗೇಂದ್ರ ಅದೃಷ್ಟ ಖುಲಾಯಿಸಿದೆ. ಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದ ಉಮಾಶ್ರೀ ಅವರಿಗೆ ವಿಧಾನ ಪರಿಷತ್ ಉಪಸಭಾಪತಿ ಹುದ್ದೆ ನೀಡಿ ಸಮಾಧಾನ ಮಾಡಲಾಗಿದೆ. ಹಲವು ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು ಕೂಡ ಅಚ್ಚರಿಯ ಬೆಳವಣಿಗೆ. ಹಲವು ಹಿರಿಯ ತಲೆಗಳೂ ನಿರೀಕ್ಷೆಯಂತೆ ಸ್ಥಾನ ಪಡೆದಿದ್ದಾರೆ.
ಏನಿದ್ದರೂ ಮುಂದಿನ ಹಲವು ದಿನಗಳು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಹಗ್ಗದ ಮೇಲಿನ ನಡಿಗೆ ಅನಿವಾರ್ಯ ಆಗಬಹುದು ಎನ್ನುತ್ತಾರೆ ರಾಜಕೀಯ ಪರಿಣತರು. ಮಧು ಬಂಗಾರಪ್ಪ ಅವರಿಗೆ ಅವರು ಹಿಂದೆ ನಿರ್ವಹಣೆ ಮಾಡಿದ ಶಿಕ್ಷಣ ಖಾತೆಯೇ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಈ ಮಧ್ಯೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಸಂಗಮೇಶ್ ರಾಜೀನಾಮೆಗೆ ಮುಂದಾಗಿದ್ದಾರೆ.



























