ಕಸ್ತೂರಿ ರಂಗನ್ ವರದಿ: 7ನೇ ಕರಡು ಅಧಿಸೂಚನೆ ಪ್ರಕಟ
ಸುಳ್ಯ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಕಳೆದ ಒಂದು ದಶಕದಿಂದ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 7ನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ಪಶ್ಚಿಮ ಘಟ್ಟ ವ್ಯಾಪ್ತಿಯ ಕರ್ನಾಟಕದ 7 ಜಿಲ್ಲೆಗಳ 1,269 ಗ್ರಾಮಗಳು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿವೆ.
ಹೊಸ ಕರಡು ಅಧಿಸೂಚನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 43 ಗ್ರಾಮಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವ ಮಾಡಲಾಗಿದೆ. ಉತ್ತರ ಕನ್ನಡದ 556, ಶಿವಮೊಗ್ಗದ 446, ಚಿಕ್ಕಮಗಳೂರಿನ 137, ಕೊಡಗಿನ 53 ಹಾಗೂ ಉಡುಪಿಯ 34 ಗ್ರಾಮಗಳು ಪಟ್ಟಿಯಲ್ಲಿವೆ. ಜಿಲ್ಲೆ, ತಾಲೂಕು ಹಾಗೂ ಗ್ರಾಮವಾರು ವಿವರಗಳನ್ನು ಅಧಿಸೂಚನೆಯ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಆರು ಕರಡುಗಳ ಬಳಿಕ 7ನೇ ಅಧಿಸೂಚನೆ
ಕಸ್ತೂರಿ ರಂಗನ್ ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರ ಹಲವು ಬಾರಿ ಪ್ರಯತ್ನ ನಡೆಸಿದ್ದರೂ ರಾಜ್ಯಗಳ ಆಕ್ಷೇಪ, ಸ್ಥಳೀಯ ವಿರೋಧ ಹಾಗೂ ವಿವಿಧ ಕಾರಣಗಳಿಂದ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. 2024ರ ಜು. 31ರಂದು ಪ್ರಕಟಿಸಿದ್ದ 6ನೇ ಕರಡು ಅಧಿಸೂಚನೆಯ ಅವಧಿ ಮುಗಿದ ಬೆನ್ನಲ್ಲೇ ಕೇಂದ್ರ ಸರಕಾರ ಇದೀಗ 7ನೇ ಕರಡು ಅಧಿಸೂಚನೆ ಹೊರಡಿಸಿದೆ.
ಈ ಬಾರಿ ಸಾರ್ವಜನಿಕರು, ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಬಾಧಿತ ಗ್ರಾಮಗಳ ಜನರು ತಮ್ಮ ಅಭಿಪ್ರಾಯ, ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು 60 ದಿನಗಳ ಅವಕಾಶ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಮತ್ತೆ ಆತಂಕ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕೃಷಿ, ತೋಟಗಾರಿಕೆ ಹಾಗೂ ಸಣ್ಣ ವ್ಯಾಪಾರ ಚಟುವಟಿಕೆಗಳನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಗಳು ಈ ಬೆಳವಣಿಗೆಯನ್ನು ಗಮನಿಸುತ್ತಿವೆ. ಪರಿಸರ ಸೂಕ್ಷ್ಮ ವಲಯ ಘೋಷಣೆಯಾದಲ್ಲಿ ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್ಯ ಯೋಜನೆಗಳು ಹಾಗೂ ಸ್ಥಳೀಯ ಚಟುವಟಿಕೆಗಳ ಮೇಲೆ ನಿರ್ಬಂಧ ಬರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ವಿಶೇಷವಾಗಿ ರಸ್ತೆ ಅಭಿವೃದ್ಧಿ, ವಿದ್ಯುತ್ ಕಾಮಗಾರಿ, ಪ್ರವಾಸೋದ್ಯಮ ಯೋಜನೆಗಳು ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ನಿಯಮಗಳು ಬಿಗಿಯಾಗಬಹುದು ಎಂಬ ಚರ್ಚೆ ಆರಂಭವಾಗಿದೆ.
ಏನು ನಿರ್ಬಂಧ.? ಏನು ಅವಕಾಶ.?
ಕರಡು ಅಧಿಸೂಚನೆ ಪ್ರಕಾರ ಹೊಸ ಗಣಿಗಾರಿಕೆ, ಕಲ್ಲುಕ್ವಾರಿ, ಮರಳು ಗಣಿಗಾರಿಕೆ, ಪರಿಸರಕ್ಕೆ ಹೆಚ್ಚಿನ ಹಾನಿ ಉಂಟುಮಾಡುವ ಕೈಗಾರಿಕೆಗಳು ಹಾಗೂ ದೊಡ್ಡ ಪ್ರಮಾಣದ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವ ಪ್ರಸ್ತಾವವಿದೆ.
ಆದರೆ ಕೃಷಿ, ತೋಟಗಾರಿಕೆ, ಈಗಿರುವ ಮನೆಗಳ ದುರಸ್ತಿ ಮತ್ತು ಸಾಂಪ್ರದಾಯಿಕ ಜೀವನೋಪಾಯ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಇರುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಅಂತಿಮ ನಿರ್ಧಾರಕ್ಕೆ ಮುನ್ನ ಜನಾಭಿಪ್ರಾಯ
ಕರಡು ಪಟ್ಟಿಯಲ್ಲಿ ಗ್ರಾಮಗಳ ಹೆಸರು ಸೇರ್ಪಡೆಯಾಗಿರುವುದು ಅಂತಿಮ ಘೋಷಣೆ ಎಂದರ್ಥವಲ್ಲ. ಗ್ರಾಮಗಳ ಗಡಿ, ವ್ಯಾಪ್ತಿ, ಸೇರ್ಪಡೆ ಕುರಿತು ಸಾರ್ವಜನಿಕರಿಂದ ಬರುವ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಶೀಲಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಸ್ಥಳೀಯ ಗ್ರಾ.ಪಂ., ರೈತ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಪರಿಸರ ಸಂಘಟನೆಗಳು ಈ ಅವಧಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಅವಕಾಶವಿದೆ.
ರಾಜ್ಯದ ನಿಲುವು ಕುತೂಹಲ
ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಕರ್ನಾಟಕ ಸರಕಾರ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ವರದಿ ಜಾರಿಯಾದರೆ ಗ್ರಾಮೀಣ ಜನರ ಜೀವನ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗಬಹುದು ಎಂಬ ಕಾರಣ ನೀಡಿ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿತ್ತು. ಹೊಸ ಕರಡು ಅಧಿಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೇಂದ್ರದ ಮುಂದೆ ಯಾವ ನಿಲುವು ತಾಳಲಿದೆ ಎಂಬುದು ಈಗ ಗಮನ ಸೆಳೆದಿದೆ.
ಕರಡು ಅಧಿಸೂಚನೆಯ ಮುಖ್ಯಾಂಶಗಳು
-7ನೇ ಕರಡು ಅಧಿಸೂಚನೆ ಪ್ರಕಟ
-ಆಕ್ಷೇಪಣೆಗೆ 60 ದಿನಗಳ ಗಡುವು
-ಕೃಷಿ, ತೋಟಗಾರಿಕೆಗೆ ನಿರ್ಬಂಧ ಇಲ್ಲ
-ಮನೆಗಳ ದುರಸ್ತಿಗೆ ಅವಕಾಶ
-ಹೊಸ ಗಣಿಗಾರಿಕೆ, ಕ್ವಾರಿ, ರೆಡ್ ವರ್ಗದ ಕೈಗಾರಿಕೆಗಳಿಗೆ ನಿರ್ಬಂಧ ಪ್ರಸ್ತಾವ
-ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಬಳಿಕ ಅಂತಿಮ ಅಧಿಸೂಚನೆ
























