ಉಡುಪಿ : ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರು ಹಿಂದಿರುಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಮುಂದುವರಿದಿದ್ದು, ಜು.31ರವರೆಗೆ ಒಟ್ಟು ಮತದಾರರ ಪೈಕಿ ಶೇ.93.55 ರಷ್ಟು ಮಂದಿಯ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 10,63,876 ಮಂದಿ ಮತದಾರರಿಗೆ ಬಿಎಲ್‌ಒಗಳು ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್) ಗಳನ್ನು ತಲುಪಿಸಿದ್ದು, ಇವರಲ್ಲಿ 9,95,317 ಮಂದಿಯ ಡಿಜಿಟಲೀಕರಣ ಪೂರ್ಣ ಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಜಿಲ್ಲೆಯಲ್ಲಿ ಈವರೆಗೆ 20,582 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 27,135 ಮಂದಿ ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 7999 ಮಂದಿ ಮತದಾರರು ಆನ್‌ಲೈನ್ ಮೂಲಕ ನೊಂದಣಿಯನ್ನು ಮಾಡಿದ್ದಾರೆ ಎಂದೂ ಜಿಲ್ಲಾಧಿಕಾರಿ ಗಳ ಹೇಳಿಕೆ ತಿಳಿಸಿದೆ.

733 ಮತಗಟ್ಟೆಗಳಲ್ಲಿ ಶೇ.100 ಸಾಧನೆ
ಉಡುಪಿ ಜಿಲ್ಲೆಯಲ್ಲಿ ಶೇ.100ರಷ್ಟು ಡಿಜಿಟಲೀಕರಣ ಹಾಗೂ ಎಎಸ್‌ಡಿಡಿ (ಗೈರು, ವರ್ಗಾವಣೆ, ಮೃತ, ತೆಗೆದುಹಾಕಿದ), ಡಿಎಸ್‌ಇ ಹಾಗೂ ಪಿಎಸ್‌ಇ ಪರಿಶೀಲನೆ ಪೂರ್ಣಗೊಳಿಸಿರುವ ಮತಗಟ್ಟೆಗಳ ಸಂಖ್ಯೆ 733ಕ್ಕೇರಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಶೇ.100ರಷ್ಟು ಪ್ರಕ್ರಿಯೆ ಪೂರ್ಣಗೊಂಡ ಮತಗಟ್ಟೆಗಳ ಸಂಖ್ಯೆ ಹೀಗಿದೆ,
ಬೈಂದೂರು ಕ್ಷೇತ್ರ-142, ಕುಂದಾಪುರ-158, ಉಡುಪಿ-74, ಕಾಪು- 151, ಕಾರ್ಕಳ- 208,
ಶೇ.100ರಷ್ಟು ಪೂರ್ಣಗೊಂಡ ಮತಗಟ್ಟೆಗಳ ಪಟ್ಟಿಯನ್ನು ಪರಿಶೀಲಿಸಿ, ನಿರ್ದಿಷ್ಟ ಮತಗಟ್ಟೆಗಳ ಪಟ್ಟಿಯಲ್ಲಿ ಯಾವುದೇ ಹೊಸ ಸೇರ್ಪಡೆ ಅಥವಾ ಬದಲಾವಣೆಗಳಿದ್ದಲ್ಲಿ ಸಂಬಂಧಪಟ್ಟ ಬೂತ್‌ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಹಾಗೂ ಮತದಾರರ ನೋಂದಣಾಧಿಕಾರಿಗಳ (ಇಆರ್‌ಒ) ಗಮನಕ್ಕೆ ತರುವಂತೆ ಕೋರಲಾಗಿದೆ.
ಜಿಲ್ಲೆಯಲ್ಲಿ ಜು.31ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ
(ವಿಧಾನಸಭಾಕ್ಷೇತ್ರ, ಒಟ್ಟು ಮತದಾರರು, ಡಿಜಿಟಲೀಕರಣಗೊಂಡ ಅರ್ಜಿ, ಮೃತರ ಸಂಖ್ಯೆ, ವರ್ಗಾವಣೆಗೊಂಡವರ ಸಂಖ್ಯೆ)
118.ಬೈಂದೂರು 2,41,863 – 2,27,564 – 4804 – 5966
119.ಕುಂದಾಪುರ 2,12,473 – 2,00,309 – 3613 – 6643
120.ಉಡುಪಿ 2,21,680 – 1,99,833 – 4762 – 6533
121.ಕಾಪು 1,94,718 – 1,84,139 – 3634 – 4434
122.ಕಾರ್ಕಳ 1,93,142 – 1,83,472 – 3769 – 3559
ಒಟ್ಟು 10,63,876 – 9,95,317 – 20,582 – 27,135



















