ಯಾವುದೇ ವಿಷಯದಲ್ಲಿ ವಿಶೇಷವಾದ ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ಹಾಗೂ ವಿವಾದಿತ ವಿಷಯದ ಬಗ್ಗೆ ವೈಜ್ಞಾನಿಕ ಮತ್ತು ತಾಂತ್ರಿಕ ನೆರವನ್ನು ನೀಡಲು ಸಮರ್ಥರಾಗಿರುವ ವ್ಯಕ್ತಿ ವೈಜ್ಞಾನಿಕ ತಜ್ಞ ಎಂಬುದಾಗಿ ಪರಿಗಣಿಸಲ್ಪಡುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯ ಅಥವಾ ಪೊಲೀಸ್ ತನಿಖಾಧಿಕಾರಿಗಳು ಸಂಬಂಧಪಟ್ಟ ವಿವಾದಾಂಶಗಳನ್ನು ತೀರ್ಮಾನಿಸಲು ತಜ್ಞರ ಸಹಾಯ ಪಡೆಯಬೇಕಾಗುತ್ತದೆ. ಕಾರಣ ಸಾಮಾನ್ಯವಾಗಿ ಎಲ್ಲರೂ ಅಂದರೆ ನ್ಯಾಯಾಧೀಶರು, ಪೊಲೀಸ್ ತನಿಖಾಧಿಕಾರಿಗಳು ಸಮೇತರಾಗಿ ಪ್ರತಿಯೊಂದು ವಿಷಯಗಳ ಬಗ್ಗೆ ವಿಶೇಷವಾದ ಪರಿಣತಿ ಅಥವಾ ಜ್ಞಾನವನ್ನು ಹೊಂದಿರುವುದಿಲ್ಲ. ಭಾರತೀಯ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಅಕ್ಟ್)ನ ಕಲಂ 45ರ ಪ್ರಕಾರ ತಜ್ಞರ ವರದಿ ಮತ್ತು ಸಾಕ್ಷ್ಯವು ಪ್ರಮುಖ ಸಾಕ್ಷ್ಯಾಧಾರಗಳ ಪೈಕಿ ಒಂದಾಗಿರುವ ಸಾಕ್ಷ್ಯವಾಗಿರುತ್ತದೆ. ಆಯಾಯ ವಿಷಯಗಳಿಗೆ ಸಂಬಂಧಪಟ್ಟ ತಜ್ಞರು ಎಂದರೆ ವಿಶೇಷ ಪರಿಣತಿ ಹೊಂದಿರುವ ವೈದ್ಯರು, ಇಂಜಿನಿಯರ್‌ಗಳು, ಆಹಾರ ಪ್ರಯೋಗಾಲಯದ ಮುಖ್ಯಸ್ಥರು, ರಾಸಾಯನಿಕ ವಿಶ್ಲೇಷಕರು, ಅಬಕಾರಿ ಇಲಾಖೆಯ ತಜ್ಞರು, ಸರ್ವೆ ಇಲಾಖೆಯ ಮೋಜಣಿದಾರರು, ಮೋಟಾರು ವಾಹನ ನಿರೀಕ್ಷಕರು, ಚೀನಿವಾರರು, ಅರಣ್ಯ ಇಲಾಖಾಧಿಕಾರಿಗಳು, ಕೃಷಿ ಇಲಾಖಾಧಿಕಾರಿಗಳು, ಮತ್ತಿತರ ಇಲಾಖೆಯ ಅಧಿಕಾರಿಗಳು, ವಾಸ್ತು ಶಿಲ್ಪಿಗಳು ಮುಂತಾದವರು ತಾವು ಹೊಂದಿರುವ ಅನುಭವ, ಪರಿಣತಿ ಮತ್ತು ಕೌಶಲ್ಯವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸಿದ್ದ ಪಡಿಸುವ ವರದಿಯನ್ನು ನ್ಯಾಯಾಲಯವು ‘ತಜ್ಞರ’ ವರದಿ ಎಂಬುದಾಗಿ ಪರಿಗಣಿಸಿ ಸಾಕ್ಷ್ಯಾಧಾರವಾಗಿ ಸ್ವೀಕರಿಸುತ್ತದೆ.
ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲ್ಲೆಗೊಳಗಾದ ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ಸಂಬಂಧಪಟ್ಟ ವೈದ್ಯಾಧಿಕಾರಿಯು ಯಾವುದೇ ಸಮಯದಲ್ಲಿ ವಿಳಂಬಿಸದೆ ಆತನನ್ನು ಪರೀಕ್ಷಿಸಿ ಗಾಯಾಳುವಿನ ಹೆಸರು, ಪ್ರಾಯ, ಲಿಂಗ, ವಿಳಾಸ, ಆತನ ತಂದೆಯ ಹೆಸರು, ಗಾಯಾಳುವಿನ ಎರಡು ಗುರುತಿನ ಚಹರೆಗಳು, ಆತನನ್ನು ಕರಕೊಂಡು ಬಂದ ವ್ಯಕ್ತಿಯ ವಿವರ, ಯಾವ ಕಾರಣದಿಂದ, ಯಾವಾಗ ಮತ್ತು ಯಾರಿಂದ ಗಾಯಾಳು ಗಾಯ ಹೊಂದಿರುವ ಬಗ್ಗೆ ವಿವರ ಹೀಗೆ ಇತ್ಯಾದಿ ವಿವರಗಳನ್ನು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯ ಅಭಿರಕ್ಷೆಯಲ್ಲಿ ಇರಿಸಲಾಗುವ ನಿಗದಿ ನಮೂನೆಯ ರಿಜಿಸ್ಟರ್‌ನಲ್ಲಿ ನಮೂದಿಸಿ, ಅಗತ್ಯವಿದ್ದಲ್ಲಿ ಗಾಯಾಳುವನ್ನು ಒಳರೋಗಿಯಾಗಿ ಸೇರಿಸಿಕೊಂಡು ಆ ಕೂಡಲೇ ವೈದ್ಯರು ಗಾಯಾಳುವಿಗೆ ಸಂಬಂಧಪಟ್ಟ ವೈದ್ಯಕೀಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಂಬಂಧಪಟ್ಟ ಸರಹದ್ದಿನ ಪೊಲೀಸ್ ಠಾಣಾಧಿಕಾರಿಯವರಿಗೆ ಕಳುಹಿಸಿಕೊಡಬೇಕಾಗುತ್ತದೆ ಹಾಗೂ ಅದರ ಪ್ರತಿಯನ್ನು ತಾನು ಕಛೇರಿ ದಾಖಲೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
ಅಸ್ವಾಭಾವಿಕವಾಗಿ ಗಾಯಗೊಂಡ, ಸುಟ್ಟ, ಹತ್ಯೆಗೆ ಒಳಗಾದ, ವಿಷಪ್ರಾಶನ, ಆತ್ಮಹತ್ಯಾ, ಅಪಘಾತ ಮುಂತಾದ ಹಲವಾರು ಪ್ರಕರಣಗಳಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಅಥವಾ ಆತನ ಉಸ್ತುವಾರಿಯಲ್ಲಿನ ಇತರ ಸಕ್ಷಮ ವೈದ್ಯನು ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡಿ ಮೇಲ್ಕಾಣಿಸಿದ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಮತ್ತು ಮೇಲ್ಕಾಣಿಸಿದ ಕಾರಣಗಳಿಂದ ಮೃತರಾದ ವ್ಯಕ್ತಿಗಳ ಶವಪರೀಕ್ಷೆಗಳನ್ನು ಸ್ವತಃ ಆಸ್ಪತ್ರೆಯ ವೈದ್ಯಾಧಿಕಾರಿಯೇ ನಡೆಸಬೇಕು. ಅವರು ನೀಡಿದ ವರದಿಗಳು ನ್ಯಾಯಾಲಯದಲ್ಲಿ ತಜ್ಞರ ಸಾಕ್ಷವೆಂಬುದಾಗಿ ಪರಿಗಣಿಸಲ್ಪಡುತ್ತದೆ. ಈ ಮೇಲ್ಕಾಣಿಸಿದ ಪ್ರಕರಣಗಳಲ್ಲಿ ನಮೂದಾದ ವರದಿ/ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯು ತನ್ನ ದಿನಚರಿ ಪುಸ್ತಕದಲ್ಲಿ ನಮೂದಿಸಿಕೊಂಡು ಕೇಂದ್ರ ಕಚೇರಿಗೆ ರವಾನಿಸಬೇಕಾಗುತ್ತದೆ.













